ಮುಂಬೈ: ಮುಂದಿನ ಎರಡು ತಿಂಗಳಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುಂಚಿತವಾಗಿ ಕಾಂಗ್ರೆಸ್-ಎನ್ಸಿಪಿಯ ನಾಲ್ವರು ಶಾಸಕರು ರಾಜೀನಾಮೆ ನೀಡಿದ್ದಾರೆ. ಇದರ ಮಧ್ಯೆ ಅವರು ಭಾರತೀಯ ಜನತಾ ಪಾರ್ಟಿ ಸೇರುವ ಸಾಧ್ಯತೆ ಇದೆ.
ಎನ್ಸಿಪಿ ಶಾಸಕರಾಗಿರುವ ಶಿವೇಂದ್ರ ಸಿನ್ರಾಜೆ ಬೋಸಲೆ, ವೈಭವ್ ಪಿಚಾಡ ಹಾಗೂ ಸಂದೀಪ್ ನಾಯಕ್ ಮತ್ತು ಕಾಂಗ್ರೆಸ್ ಎಂಎಲ್ಎ ಕಾಳಿದಾಸ್ ಕೋಲ್ಬಕರ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ತಮ್ಮ ರಾಜೀನಾಮೆ ಪತ್ರಗಳನ್ನ ಸ್ಪೀಕರ್ ಹರಿಬಾಬು ಬಗಾಡೆ ಅವರಿಗೆ ಸಲ್ಲಿಕೆ ಮಾಡಿದ್ದಾರೆ.
ಇನ್ನು ಆಡಳಿತ ಪಕ್ಷ ಬಿಜೆಪಿ ಸೇರ್ಪಡೆ ಬಗ್ಗೆ ಆದಷ್ಟು ಬೇಗ ನಿರ್ಧಾರ ಕೈಗೊಳ್ಳುವ ಬಗ್ಗೆ ಮಾಹಿತಿ ಹೊರಹಾಕಲಿದ್ದಾರೆ ಎಂದು ತಿಳಿದು ಬಂದಿದೆ. ಇವರು ಪಕ್ಷ ಸೇರ್ಪಡೆಗೆ ಸಂಬಂಧಿಸಿದಂತೆ ಕಳೆದ ಕೆಲ ದಿನಗಳ ಹಿಂದೆ ಮಹಾರಾಷ್ಟ್ರ ಬಿಜೆಪಿ ಘಟಕದ ನೂತನ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಸುಳಿವೊಂದನ್ನ ನೀಡಿದ್ದರು. ಈ ಸಲದ ವಿಧಾನಸಭೆ ಚುನಾವಣೆಯಲ್ಲಿ 288 ಕ್ಷೇತ್ರಗಳ ಪೈಕಿ 220 ಸ್ಥಾನ ಗೆಲುವ ಗುರಿ ಹೊಂದಿರುವ ಬಿಜೆಪಿ ಈಗಿನಿಂದಲೇ ಚುನಾವಣೆಗೆ ಮಹತ್ವದ ತಯಾರಿ ನಡೆಸಿದೆ.