ಹೈದರಾಬಾದ್: ಟಿಆರ್ಎಸ್ ಹಿರಿಯ ನಾಯಕ ಹಾಗೂ ಮಾಜಿ ಗೃಹ ಸಚಿವ ನಾಯನಿ ನರಸಿಂಹ ರೆಡ್ಡಿ (76) ಇಂದು ನಿಧನರಾಗಿದ್ದಾರೆ. ತೆಲಂಗಾಣದ ಮೊದಲ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದ ನರಸಿಂಹ ರೆಡ್ಡಿ ಕೊರೊನಾ ನಂತರ ಶ್ವಾಸಕೋಶದ ಸಮಸ್ಯೆಗೆ ಇಲ್ಲಿನ ಖಾಸಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಹೈದರಾಬಾದ್ನ ಟ್ರೇಡ್ ಯೂನಿಯನ್ ಹಿರಿಯ ಮುಖಂಡರಾಗಿದ್ದ ಇವರು ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ಪ್ರಮುಖರಾಗಿದ್ದರು. ಆಂಧ್ರ ವಿಭಜನೆಗೂ ಮೊದಲು 1978, 1985 ಮತ್ತು 2014ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು.
ಇದಲ್ಲದೆ ದಿವಂಗತ ವೈ.ಎಸ್.ರಾಜಶೇಖರ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗ ಸಂಪುಟ ದರ್ಜೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.
ಇನ್ನು ನಿನ್ನೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಆಸ್ಪತ್ರೆಗೆ ಭೇಟಿ ನೀಡಿ ರೆಡ್ಡಿಯವರ ಆರೋಗ್ಯದ ಕುರಿತು ಮಾಹಿತಿ ಪಡೆದಿದ್ದರು. ಆದರೆ ಇಂದು ನರಸಿಂಹ ರೆಡ್ಡಿ ಮೃತಪಟ್ಟಿದ್ದು, ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲು ಸಿಎಂ ಸೂಚನೆ ನೀಡಿದ್ದಾರೆ. ಇವರ ಅಗಲಿಕೆಗೆ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ.