ನವದೆಹಲಿ: ದೇಶಾದ್ಯಂತ ಸಂಚರಿಸಲು ಸುಪ್ರೀಂಕೋರ್ಟ್ನ ನಿವೃತ್ತ ಮುಖ್ಯನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯ್ ಅವರಿಗೆ ಕೇಂದ್ರ ಸರ್ಕಾರ 'Z+' ಸೆಕ್ಯುರಿಟಿ ನೀಡಿದೆ.
ಹಾಲಿ ರಾಜ್ಯಸಭಾ ಸಂಸದರಾಗಿರುವ ರಂಜನ್ ಗೊಗೊಯ್ (66) ದೇಶದ ಯಾವ ಭಾಗದಲ್ಲಿ ಸಂಚರಿಸಿದರೂ ಅವರಿಗೆ ದೆಹಲಿ ಪೊಲೀಸರೊಂದಿಗೆ, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್)ಯ 8 ರಿಂದ 10 ಶಸ್ತ್ರಸಜ್ಜಿತ ಕಮಾಂಡೋಗಳು ಸಂಪೂರ್ಣ ಭದ್ರತೆ ನೀಡಲಿದ್ದಾರೆ. ಗೊಗೊಯ್ ಅವರ ಮನೆಯ ಸುತ್ತಲೂ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: ಮೃತ ವ್ಯಕ್ತಿಯ ವೀರ್ಯಾಣು ಪಡೆಯುವ ಹಕ್ಕು ಪತ್ನಿಗೆ ಮಾತ್ರವಿದೆ: ಕಲ್ಕತ್ತಾ ಹೈಕೋರ್ಟ್
2019ರಲ್ಲಿ ಸಿಜೆಐ ಹುದ್ದೆಯಿಂದ ನಿವೃತ್ತಿ ಹೊಂದಿದ ಗೊಗೊಯ್ಗೆ ಮೇಲ್ಮನೆಯ ಸದಸ್ಯ ಸ್ಥಾನ ನೀಡಲಾಗಿತ್ತು. ಎಂಸಿಎಂ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಮತ್ತು ಇಥಾಲಿಯಾ ಥಾಯ್ ಡೆವಲಪ್ಮೆಂಟ್ ಪಬ್ಲಿಕ್ ಕಂಪನಿ ಲಿಮಿಟೆಡ್ ನಡುವಿನ ಪ್ರಕರಣದಲ್ಲಿ ಎರಡೂ ಪಾರ್ಟಿಗಳ ಒಪ್ಪಿಗೆ ಮೇರೆಗೆ ರಂಜನ್ ಗೊಗೊಯ್ ಅವರನ್ನು ಇತ್ತೀಚೆಗೆ ಏಕೈಕ ಮಧ್ಯಸ್ಥಿಕೆದಾರನನ್ನಾಗಿ ಸುಪ್ರೀಂಕೋರ್ಟ್ ನೇಮಿಸಿತ್ತು. ಇವರಿಗೆ ಜೀವ ಬೆದರಿಕೆ ಹಾಕಿರುವ ಆರೋಪಗಳು ಕೇಳಿಬಂದಿತ್ತು.
ಏನಿದು 'Z+' ಸೆಕ್ಯುರಿಟಿ?
ಭಾರತದಲ್ಲಿ Z+, Z, Y+ ಹಾಗೂ X ಎಂಬ ನಾಲ್ಕು ಬಗೆಯ ಭದ್ರತಾ ವಿಭಾಗಗಳಿವೆ. ರಾಜಕಾರಣಿಗಳು, ಸಿನಿಮಾ- ಕ್ರೀಡಾ ತಾರೆಗಳು, ನ್ಯಾಯಮೂರ್ತಿಗಳು ಸೇರಿದಂತೆ ಹೈ-ಪ್ರೊಫೈಲ್ ಸೆಲೆಬ್ರಿಟಿಗಳು ಬೆದರಿಕೆ ಎದುರಿಸುತ್ತಿರುವ ಸಂದರ್ಭದಲ್ಲಿ ವಿಶೇಷ ಭದ್ರತೆಯನ್ನು ನೀಡಲಾಗುತ್ತದೆ. 'Z' ಪ್ಲಸ್ ಲೆವೆಲ್ ಭದ್ರತೆಯಲ್ಲಿ ಪೊಲೀಸರು ಸೇರಿದಂತೆ 8 ರಿಂದ 10 ಕಮಾಂಡೋಗಳು ಬೆದರಿಕೆಗೊಳಗಾದ ವ್ಯಕ್ತಿಗೆ ಭದ್ರತೆ ನೀಡಲಿದ್ದಾರೆ.