ನವದೆಹಲಿ : ಭಾರತೀಯ ಸೇನೆಯಲ್ಲಿ ಪ್ರತ್ಯೇಕ ಬೋಡೋ ರೆಜಿಮೆಂಟ್ ಅನ್ನು ಸ್ಥಾಪಿಸಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದ ಬೋಡೋ ಬಂಡುಕೋರ ಮುಖಂಡರು ತಮ್ಮ ಬೇಡಿಕೆಯನ್ನು ಈಗ ಹಿಂಪಡೆದಿದ್ದು, ಸದೃಢ ಗೆರಿಲ್ಲಾ ಹೋರಾಟಗಾರರನ್ನು ಸೇನೆಗೆ ಸೇರ್ಪಡೆಗೊಳಿಸಲು ನಿರ್ಧರಿಸಿದ್ದು, 1,500 ರಿಂದ 2,000 ಗೆರಿಲ್ಲಾ ಹೋರಾಟಗಾರರು ಅರೆಸೇನಾ ಪಡೆ, ಸೇನೆ ಮತ್ತು ಪೊಲೀಸ್ ಪಡೆಗಳಿಗೆ ಸೇರಲಿದ್ದಾರೆ.
ಇತ್ತೀಚೆಗಷ್ಟೇ ಶರಣಾಗಿರುವ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ (ಎನ್‌ಡಿಎಫ್‌ಬಿ) ಬಂಡುಕೋರರು ಸೇರಿದಂತೆ ಸುಮಾರು 1,500ರಿಂದ 2000 ಬೋಡೋ ಯುವಕರು ತಮ್ಮ ಶಸ್ತ್ರಗಳನ್ನು ಕೆಳಗಿಟ್ಟು ಅಸ್ಸೋಂ ಸರ್ಕಾರಕ್ಕೆ ಶರಣಾಗಲಿದ್ದಾರೆ. ಅಷ್ಟೇ ಅಲ್ಲ ಭಾರತದ ಸಂವಿಧಾನಕ್ಕೆ ಬದ್ಧವಾಗಿರುತ್ತೇವೆ ಎಂದು ಪ್ರಮಾಣ ಮಾಡಲಿದ್ದಾರೆ. ಅವರು ಫೆಬ್ರವರಿ ಅಂತ್ಯದೊಳಗೆ ಶರಣಾಗಲು ಅವಕಾಶ ಹೊಂದಿದ್ದಾರೆ.
ವಿಶ್ವಸಂಸ್ಥೆಯ ನಿಯಮಗಳು ಮತ್ತು ರಾಷ್ಟ್ರೀಯ ನೀತಿಯ ಪ್ರಕಾರ ಸೇನೆಯಲ್ಲಿ ಪ್ರತ್ಯೇಕ ಬೋಡೋ ರೆಜಿಮೆಂಟ್ ಸ್ಥಾಪನೆ ಮಾಡಲು ಸಾಧ್ಯವಿಲ್ಲ ಎಂದು ಭಾರತ ಸರ್ಕಾರವು ಮನವರಿಕೆ ಮಾಡಿದೆ. ಇಷ್ಟು ವರ್ಷಗಳವರೆಗೆ ಈ ಬಗ್ಗೆ ಹೋರಾಟ ಮಾಡುತ್ತಾ ವಿದೇಶಗಳಲ್ಲಿ ತಮ್ಮ ಯೌವನವನ್ನು ಕಳೆದ ಯುವಕರಿಗೆ ಸರ್ಕಾರದ ವಿವಿಧ ಹುದ್ದೆಗಳನ್ನು ಪಡೆಯಲಿದ್ದಾರೆ. ಅವರಿಗೆ ಉದ್ಯಮ ಸ್ಥಾಪಿಸಲು ನೆರವು ನೀಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ ಎಂದು ಎನ್‌ಡಿಎಪ್‌ಬಿಯ ಪ್ರಧಾನ ಕಾರ್ಯದರ್ಶಿ ಗೋಬಿಂದ ಬಸುಮಾಟರಿ 'ಈಟಿವಿ ಭಾರತ್'ಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
ಸೋಮವಾರ ಕೇಂದ್ರ ಸರ್ಕಾರ, ಅಸ್ಸೋಂ ಸರ್ಕಾರ ಮತ್ತು ಎನ್‌ಡಿಎಫ್‌ಬಿ, ಆಲ್ ಬೋಡೋ ಸ್ಟೂಡೆಂಟ್ಸ್ ಯೂನಿಯನ್ (ಎಬಿಎಸ್‌ಯು) ಮತ್ತು ಯುನೈಟೆಡ್ ಬೋಡೋ ಪೀಪಲ್ಸ್ ಆರ್ಗನೈಸೇಷನ್ (ಯುಬಿಪಿಒ) ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ಪ್ರಕ್ರಿಯೆಯಲ್ಲಿ ಬಸುಮತರಿ ಕೂಡ ಭಾಗವಹಿಸಿದ್ದರು.
ಈಗಾಗಲೇ ಹಲವು ನಾಗಾ ಬಂಡುಕೋರರು, ಗಡಿ ಕಾಯುವಲ್ಲಿ ತೊಡಗಿಸಿಕೊಂಡಿರುವ ಬಿಎಸ್‌ಎಫ್, ಅರೆಸೇನಾ ಪಡೆಗೆ ಸೇರ್ಪಡೆಗೊಂಡಿರುವ ಉದಾಹರಣೆಗಳಿವೆ. 80ರ ದಶಕದಲ್ಲಿ ಅಸ್ಸೋಂನಲ್ಲಿ ಪ್ರಾದೇಶಿಕ ರಾಜಕೀಯ ಶಕ್ತಿಗಳಿಗೆ ಪೂರಕವಾಗಿ ಗುಪ್ತಚರ ದಳಗಳು ಹುಟ್ಟುಹಾಕಿವೆ ಎಂದು ಹೇಳಲಾದ ದಶಕಗಳಷ್ಟು ಹಳೆಯ ಹಿಂಸಾತ್ಮಕ ಚಳವಳಿಯ ಅಂತಿಮ ಘಟ್ಟ ಇದು. ತಮ್ಮ ಬೇಡಿಕೆಯನ್ನು ಪೂರೈಸಿಕೊಳ್ಳಲು ಹಿಂಸಾತ್ಮಕವಾಗಿ ನಡೆಸಿದ ಹೋರಾಟಕ್ಕೆ ಕೊನೆ ಹಾಡುವ ಸೂಚನೆಯನ್ನು ಈ ಒಪ್ಪಂದ ನೀಡಿದೆ.
ಕೇಂದ್ರ ಸರ್ಕಾರದ ಜೊತೆಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಮಾಜಿ ಬಂಡುಕೋರರಿಗೆ ಪುನಶ್ಚೇತನವನ್ನು ಸರ್ಕಾರ ಕಲ್ಪಿಸಲಿದೆ. ಸದೃಢ ಬಂಡುಕೋರರಿಗೆ ಅರೆಸೇನಾ ಪಡೆಗಳಲ್ಲಿ ಮತ್ತು ಸೇನಾಪಡೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿಯಲ್ಲಿ ಇವರನ್ನು ಪರಿಗಣಿಸಲಾಗುತ್ತದೆ. ಶೀಘ್ರದಲ್ಲೇ ಈ ಪ್ರಕ್ರಿಯೆ ಆರಂಭವಾಗಲಿದೆ ಎಂದು ನಾವು ನಿರೀಕ್ಷಿಸಿದ್ದೇವೆ ಎಂದಿದ್ದಾರೆ.
ಸೇನೆಗೆ ಸೇರಲು ಅರ್ಹ ವಯೋಮಾನವನ್ನು ಮೀರಿದವರು ಅಥವಾ ಸೇನೆಗೆ ಸೇರಲು ಅರ್ಹರಾಗದವರಿಗೆ ಉದ್ಯಮ ಸ್ಥಾಪನೆಗೆ ನೆರವು ನಿಡಲಾಗುತ್ತದೆ. ಕೋಳಿ ಸಾಕಣೆ, ಕೃಷಿ, ಹಂದಿ ಸಾಕಾಣಿಕೆ ಇತ್ಯಾದಿ ಚಟುವಟಿಕೆಗಳ ಮೂಲಕ ಉದ್ಯೋಗ ಕಂಡುಕೊಳ್ಳಲು ತರಬೇತಿ ನೀಡಲಾಗುತ್ತದೆ.
ಅಸ್ಸಾಂ ವಿಭಜನೆ ಮಾಡಿ ಪ್ರತ್ಯೇಕ ರಾಜ್ಯವನ್ನು ಸ್ಥಾಪಿಸುವ ಬೇಡಿಕೆಯನ್ನು ಬೋಡೋ ಯುವಕರು ಮತ್ತು ಸಂಸ್ಥೆಗಳು ಮುಂದುವರಿಸಲಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಸುಮಾಟರಿ, ಈಗ ಪ್ರತ್ಯೇಕ ರಾಜ್ಯದ ಅಗತ್ಯವಿಲ್ಲ ಎಂದಿದ್ದಾರೆ. ಈಗ ನಮಗೆ ನೀಡಿರುವುದು ಸಂತೃಪ್ತಿ ತಂದಿದೆ. ಈಗ ನಮಗೆ ಒದಗಿಸಿರುವ ಸೌಲಭ್ಯವು ಹೊಸ ರಾಜ್ಯದಲ್ಲಿ ನೀಡುವ ಸೌಲಭ್ಯಕ್ಕೆ ಸಮಾನವಾಗಿದೆ. ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ರಕ್ಷಿಸುವ ಭರವಸೆಯನ್ನು ಸರ್ಕಾರ ನೀಡಿದೆ. ನಾಗರಿಕರಾಗಿ ನಾವು ಸಾಮಾನ್ಯ ಜೀವನ ನಡೆಸಲು ಒಪ್ಪಂದ ಮಾಡಿಕೊಂಡಿದ್ದೇವೆ. ನಮ್ಮ ಈ ನಾಡನ್ನು ನಾವು ಶಾಂತಿ ಮತ್ತು ಅಭಿವೃದ್ಧಿಯತ್ತ ಕೊಂಡೊಯ್ಯಲಿದ್ದೇವೆ ಎಂದು ಎನ್‌ಡಿಎಫ್‌ಬಿ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ ಎಂದರು.