ಮೀರತ್(ಉತ್ತರ ಪ್ರದೇಶ): ವಿದೇಶದಿಂದ ಉತ್ತರ ಪ್ರದೇಶದ ಹರಿದ್ವಾರ - ಋಷಿಕೇಶ್ ಸುತ್ತಾಡಲು ಆಗಮಿಸಿದ್ದ ಮಹಿಳೆಯೊಬ್ಬರಿಗೆ ಆಕೆಯ ಸ್ನೇಹಿತರು ಕಿರುಕುಳ ನೀಡಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.
ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಮೀರತ್ನಿಂದ ವಾಪಸ್ ತೆರಳುತ್ತಿದ್ದ ವೇಳೆ ಚಲಿಸುತ್ತಿದ್ದ ಕಾರಿನಲ್ಲಿ ಆಕೆಯ ಜತೆ ಜಗಳವಾಡಿರುವ ಸ್ನೇಹಿತರು, ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದಾರೆ. ಇದಾದ ಬಳಿಕ ಚಲಿಸುತ್ತಿದ್ದ ಕಾರಿನಿಂದ ಹೊರಗೆ ಎಸೆದು ಪರಾರಿಯಾಗಿದ್ದಾರೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧಕಾರ್ಯ ನಡೆಸುತ್ತಿದ್ದು, ವಿದೇಶಿ ಮಹಿಳೆಯನ್ನ ದೆಹಲಿಗೆ ಕಳುಹಿಸುವ ಎಲ್ಲ ವ್ಯವಸ್ಥೆ ಮಾಡಿದ್ದಾರೆ.
ಮಾಹಿತಿ ನೀಡಿರುವ ಪೊಲೀಸರ ಪ್ರಕಾರ, ಯುವತಿ ಮೂಲತಃ ಆಫ್ಘಾನಿಸ್ಥಾನದವಳಾಗಿದ್ದು, ಕಳೆದ ಕೆಲ ದಿನಗಳಿಂದ ದೆಹಲಿಯಲ್ಲಿ ವಾಸವಾಗಿದ್ದರು. ಇಲ್ಲಿ ಆಕೆಗೆ ಮೊಹಮ್ಮದ್ ಮುಲ್ಲಾ, ಮುಸ್ತಾಫ್ ಹಾಗೂ ತಬ್ಸೂಮ್ ಪರಿಚಯವಾಗಿದ್ದರು. ಕಳೆದ ಶನಿವಾರ ಹೃಷಿಕೇಶಕ್ಕೆ ತೆರಳಿ ಅಲ್ಲಿಂದ ವಾಪಸ್ ಆಗುತ್ತಿದ್ದಾಗ ಜಗಳವಾಡಿದ್ದಾರೆ. ಜತೆಗೆ ಆಕೆಯ ಮೇಲೆ ಹಲ್ಲೆ ನಡೆಸಿ ಕಾರಿನಿಂದ ಹೊರಗೆ ಎಸೆದು ಪರಾರಿಯಾಗಿದ್ದಾರೆ. ಸ್ಥಳಕ್ಕಾಗಮಿಸಿರುವ ಪೊಲೀಸರು ಇದೀಗ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ.