ನವದೆಹಲಿ: ವಿದೇಶಿ ನೇರ ಬಂಡವಾಳ ಹೂಡಿಕೆಯಂತಹ ಹಲವು ಉತ್ತಮ ಸೂಚಕಗಳು ಕಂಡುಬಂದಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನಾವು ಯುಥೋಪಿಯಾದಲ್ಲಿದ್ದೇವೆಯೇ?:
ಲೋಕಸಭೆಯಲ್ಲಿ ಬಜೆಟ್ ಕುರಿತು ಚರ್ಚೆ ನಡೆಸುತ್ತಿರುವಾಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ದೇಶದ ಆರ್ಥಿಕತೆ ಸುಧಾರಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಇವರೇ ಎರಡು ತಿಂಗಳ ಹಿಂದಷ್ಟೇ ದೇಶದಲ್ಲಿ ಆರ್ಥಿಕ ಹಿಂಜರಿಕೆ ಇಲ್ಲವೇ ಇಲ್ಲ ಎಂದು ಹೇಳಿಕೆ ನೀಡಿದ್ದರು.
ತಾನೇ ಸ್ವತಃ ಹಣಕಾಸು ಸಮೀಕ್ಷೆ ಡೆವಲಪ್‌ಮೆಂಟ್ ಅಂದಾಜುಗಳನ್ನು ನೋಡಿದ್ದು, ವಿದೇಶಿ ನೇರ ಬಂಡವಾಳ ಹೂಡಿಕೆಯಂತಹ ಹಲವು ಉತ್ತಮ ಸೂಚಕಗಳು ಕಂಡುಬಂದಿವೆ ಎಂದು ಹಣಕಾಸು ಸಚಿವೆ ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ಸಿಎಜಿ, ಆರ್‌ಬಿಐ, ಸಿಎಸ್‌ಐ ಹಾಗೂ ವಿಶ್ವ ಬ್ಯಾಂಕ್ ಸೇರಿದಂತೆ ಹಲವು ಸಂಸ್ಥೆಗಳು ದೇಶದ ಆರ್ಥಿಕತೆ ಕುಸಿಯುತ್ತಿದೆ ಎಂದು ಹೇಳಿವೆ. ಅದರಲ್ಲೂ ವಾಹನ, ಪವರ್, ನೈಸರ್ಗಿಕ ಅನಿಲ, ಕೃಷಿ, ನಿರ್ಮಾಣ ಇತ್ಯಾದಿ ವಲಯದಲ್ಲಿ ಪ್ರಗತಿ ದರ ಗಮನಾರ್ಹ ಪ್ರಮಾಣದಲ್ಲಿ ಕುಸಿದಿರುವ ಬಗ್ಗೆ ಇವು ಎಚ್ಚರಿಕೆ ನೀಡಿವೆ. ಸರ್ಕಾರ ಈ ಎಚ್ಚರಿಕೆಗಳಿಗೆ ತಲೆಕೆಡಿಸಿಕೊಂಡಿಲ್ಲ. ಅಷ್ಟೇ ಅಲ್ಲ, ಅವೆಲ್ಲ ಉತ್ತಮ ಪ್ರಗತಿ ಸಾಧಿಸುತ್ತಿವೆ ಎಂದೇ ಹಣಕಾಸು ಸಚಿವೆ ಹೇಳಿಕೊಂಡೇ ಬಂದಿದ್ದಾರೆ.
ಸಚಿವರು ಹೇಳಿರುವಂತೆ 2019 ರಲ್ಲಿ ಏಪ್ರಿಲ್‌ನಿಂದ ನವೆಂಬರ್ ಮಧ್ಯೆ ಎಫ್‌ಡಿಐ ಒಳಹರಿವು 24.4 ಬಿಲಿಯನ್ ಡಾಲರ್‌ಗಳಾಗಿದೆ (ಒಂದು ಬಿಲಿಯನ್ ಡಾಲರ್ ಎಂದರೆ 7133 ಕೋಟಿ ರೂ.). ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಬರಿ ಮೂರು ಬಿಲಿಯನ್ ಡಾಲರ್ ಕಡಿಮೆ ಇದೆ ಎಂದು ಅವರು ಹೇಳಿದ್ದಾರೆ. ಕಳೆದ ಮೂರು ವಾರಗಳ ಹಿಂದೆ 2019 ರಲ್ಲಿ ಎಫ್‌ಡಿಐ ಆಕರ್ಷಿಸಿದ ಮೊದಲ 10 ದೇಶಗಳ ಪಟ್ಟಿಯನ್ನು ಯುಎನ್‌ಒ ಬಿಡುಗಡೆ ಮಾಡಿದೆ. ಇದರಲ್ಲಿ ಅಮೆರಿಕ, ಚೀನಾ ಮತ್ತು ಸಿಂಗಾಪುರ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿದೆ. ನಂತರದಲ್ಲಿ ಬ್ರೆಜಿಲ್, ಯುಕೆ, ಹಾಂಕಾಂಗ್ ಮತ್ತು ಫ್ರಾನ್ಸ್ ಇದೆ. ಭಾರತವು ಈ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದುಕೊಂಡಿದೆ. ಭಾರತವು ಸ್ವೀಕರಿಸಿದ ಎಫ್‌ಡಿಐ ಮೊತ್ತವು ಅಮೆರಿಕ ಪಡೆದ ಒಟ್ಟು ಎಫ್‌ಡಿಐಗೆ ಹೋಲಿಸಿದರೆ 5ನೇ ಒಂದರಷ್ಟಾಗಿದೆ. ಭಾರತಕ್ಕಿಂತ ಮೂರು ಪಟ್ಟು ಹೆಚ್ಚು ಎಫ್‌ಡಿಐ ಅನ್ನು ಚೀನಾ ಪಡೆದಿದೆ. ಈ ಸನ್ನಿವೇಶದಲ್ಲಿ, ಹಣಕಾಸು ಸಚಿವಾಲಯವು ಕನಸಿನಲ್ಲಿ ತೇಲಾಡುತ್ತಿರುವಂತಿದೆ!
ಕಳೆದ 20 ವರ್ಷಗಳ ಅಂಕಿಸಂಖ್ಯೆಗಳನ್ನು ನಾವು ಗಮನಿಸಿದರೆ, ಗರಿಷ್ಠ ಎಫ್‌ಡಿಐ ಆಗಮಿಸಿದ್ದು 2016 ಜನವರಿಯಿಂದ ಡಿಸೆಂಬರ್ ಅವಧಿವರೆಗೆ. ಆ ಮಟ್ಟವನ್ನು ತಲುಪಲು ಸಾಧ್ಯವಾಗದ ಸರ್ಕಾರ ಆರು ತಿಂಗಳ ಹಿಂದೆ ಒಂದಷ್ಟು ತೆರಿಗೆ ವಿನಾಯಿತಿಯನ್ನು ಘೋಷಿಸಿದೆ. ಕಲ್ಲಿದ್ದಲು ಗಣಿಗಾರಿಕೆ, ಒಪ್ಪಂದದ ಅಡಿಯಲ್ಲಿ ಉತ್ಪಾದನೆಗೆ ಶೇ. 100 ಎಫ್‍ಡಿಐಗಳನ್ನು ಅನುಮತಿಸಲಾಗಿದೆ ಮತ್ತು ಸಿಂಗಲ್ ಬ್ರಾಂಡ್ ರಿಟೇಲ್ ನಿಯಮಗಳನ್ನೂ ಸಡಿಲಿಸಲಾಗಿದೆ. ಇವು ಹೇಗೆ ಉತ್ತಮ ಫಲಿತಾಂಶಗಳನ್ನು ನೀಡಬಹುದು ಎಂಬುದಕ್ಕೆ ನಿರೀಕ್ಷೆಗಳು ಹೆಚ್ಚಿವೆ. ರಕ್ಷಣೆ ಮತ್ತು ವಾಯುಯಾನ ವಲಯದಲ್ಲಿ ಎಫ್‍ಡಿಐಗಳಿಗೆ ಅವಕಾಶ ನೀಡಲಾಗಿದ್ದು, ಈ ಐದು ವರ್ಷಗಳಲ್ಲಿ ಈ ಕ್ಷೇತ್ರಕ್ಕೆ ಬಂದ ಹಣ ಕೇವಲ 1800 ಕೋಟಿ ರೂ.ಗಳು. ಯಾಕೆ ಗುರಿ ತಲುಪಲು ಸಾಧ್ಯವಾಗಿಲ್ಲ ಎಂದು ಸರ್ಕಾರ ಆತ್ಮವಿಮರ್ಶೆ ಮಾಡಿಕೊಳ್ಳದೇ ಇರುವುದು ಮತ್ತು ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳದೆ ಸರ್ಕಾರವು ಅತಿಯಾದ ಆತ್ಮವಿಶ್ವಾಸವನ್ನು ತೋರ್ಪಡಿಸುತ್ತಿದೆ. ಇದರಿಂದಾಗಿ ದೇಶದ ದೀರ್ಘಕಾಲೀನ ಹಿತಾಸಕ್ತಿಗೆ ಧಕ್ಕೆ ಉಂಟಾಗುತ್ತದೆ.
ಬಾಂಗ್ಲಾದೇಶದಲ್ಲಿ 2018 ಕ್ಕೆ ಹೋಲಿಸಿದರೆ 2019 ರಲ್ಲಿ ಎಫ್‌ಡಿಐ ಒಳಹರಿವು ಇಳಿಕೆಯಾಗಿದೆ. ಪಾಕಿಸ್ತಾನದಲ್ಲಿ ಶೇ. 20 ರಷ್ಟು ಕುಸಿತ ಕಂಡುಬಂದಿದೆ. ದಕ್ಷಿಣ ಏಷ್ಯಾದ ಸನ್ನಿವೇಶವನ್ನು ನಾವು ಗಮನಿಸಿದರೆ, ಭಾರತದಲ್ಲಿನ ಎಫ್‌ಡಿಐ ಗಮನಾರ್ಹವಾಗಿ ಏರಿಕೆಯಾಗಿದೆ. ಆದರೆ ಇವು 5 ಲಕ್ಷ ಕೋಟಿ ಡಾಲರ್ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಮತ್ತು ಶೇ. 8 ರ ಆರ್ಥಿಕ ಪ್ರಗತಿ ದರವನ್ನು ಸಾಧಿಸಲು ಏನೇನೂ ಸಾಲದು. ಎಫ್‌ಡಿಐ ಆಕರ್ಷಿಸುವಲ್ಲಿ ಮೊದಲ ಮೂರನೇ ದೇಶವಾಗಿ ಹೊರಹೊಮ್ಮಲು ದೇಶವು ತಂತ್ರವನ್ನು ರೂಪಿಸಬೇಕಿದೆ. ವಿಶ್ವ ವಾಣಿಜ್ಯ ವೇದಿಕೆ (ಡಬ್ಲ್ಯೂಇಎಫ್) ಪ್ರಕಾರ ಭಾರತವು ಪ್ರಗತಿಯಲ್ಲಿ ಹಿಂದೆ ಸರಿಯುತ್ತಿದೆ ಎಂದು ಸ್ಪಷ್ಟಪಡಿಸಿದೆ. ಕೌಶಲ ಕೊರತೆ, ಕಾರ್ಮಿಕ ಮಾರುಕಟ್ಟೆ ಮತ್ತು ಆರೋಗ್ಯ ಸೇವೆಯಲ್ಲಿನ ವ್ಯತ್ಯಯವೇ ಇದಕ್ಕೆ ಕಾರಣ ಎಂದೂ ಅದು ಹೇಳಿದೆ. ಹೀಗಾಗಿ ಎಲ್ಲಿ ಸಮಸ್ಯೆ ಸರಿಪಡಿಸಬೇಕು ಎಂಬುದು ಸ್ಪಷ್ಟವಿದೆ.
ಪ್ರಧಾನಿ ನರೇಂದ್ರ ಮೋದಿ ನಾಲ್ಕು ತಿಂಗಳುಗಳ ಹಿಂದೆ ನ್ಯೂಯಾರ್ಕ್‌ನಲ್ಲಿ ನಡೆದ ಬ್ಲೂಂಬರ್ಗ್ ಗ್ಲೋಬಲ್ ಬ್ಯುಸಿನೆಸ್ ಫೋರಂನಲ್ಲಿ ಮಾತನಾಡಿ, ಭಾರತದಲ್ಲಿ ಹೂಡಿಕೆಗೆ ಅಪಾರ ಅವಕಾಶಗಳಿವೆ ಎಂದು ಹೇಳಿಕೆ ನೀಡಿ, ಹೂಡಿಕೆದಾರರನ್ನು ಆಕರ್ಷಿಸುವ ಮಾತುಗಳನ್ನಾಡಿದ್ದಾರೆ. ಅವರು ಭಾರತದಲ್ಲಿ ಹೂಡಿಕೆ ಮತ್ತು ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಮಾತನಾಡಿದ್ದಾರೆ. ಆದರೆ ಆಡಳಿತ ಯಂತ್ರದಲ್ಲಿ ಈ ಕುರಿತ ಕ್ರಮಗಳ ಕೊರತೆಯಿಂದಾಗಿ ಹಲವು ಸಮಸ್ಯೆಗಳು ಎದುರಾಗುತ್ತಿವೆ.
ಸರ್ಕಾರವು ಕೆಲವು ಮೂಲ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ನಡೆಸಿದೆಯಾದರೂ, ಸರ್ಕಾರದ ಬಳಿ ಇನ್ನೂ ಹಲವು ಸವಾಲುಗಳಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ. ತ್ವರಿತ ಪರಿಹಾರ ಕ್ರಮಗಳು ಇಲ್ಲದ್ದರಿಂದಾಗಿ, ಅಂತಾರಾಷ್ಟ್ರೀಯ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ 30 ಸ್ಥಾನ ಕುಸಿತ ಕಂಡಿದೆ. ಅನುಕೂಲಕರ ವಾಣಿಜ್ಯ ಆಧಾರದಲ್ಲಿ 63ನೇ ಸ್ಥಾನಕ್ಕೆ ಭಾರತ ಏರಿದರೂ, ಹಿಂದುಳಿದಿರುವಿಕೆಯು ಇಂದಿಗೂ ಸಮಸ್ಯೆಯನ್ನು ಒಡ್ಡುತ್ತಿದೆ. ನ್ಯೂಜಿಲ್ಯಾಂಡ್ನಲ್ಲಿ ಕೆಲವೇ ಗಂಟೆಗಳಲ್ಲಿ ಸ್ವತ್ತನ್ನು ನೋಂದಣಿ ಮಾಡಬಹುದು. ಅರ್ಧ ದಿನದಲ್ಲಿ ಯಾವುದೇ ವಹಿವಾಟು ಆರಂಭಿಸಬಹುದು. ಆದರೆ, ಇಲ್ಲಿ ಒಂದು ಭೂಮಿಯನ್ನು ನೋಂದಣಿ ಮಾಡಿ 154 ದಿನಗಳನ್ನು ತೆಗೆದುಕೊಳ್ಳುತ್ತದೆ ಮತ್ತು ವಹಿವಾಟು ಚಟುವಟಿಕೆ ನಡೆಸಲು 136 ದಿನಗಳು ಬೇಕು.
ಫೋರ್ಬ್ಸ್ ವರದಿಯ ಪ್ರಕಾರ ಭ್ರಷ್ಟಾಚಾರ, ವಿದ್ಯುತ್ ಪೂರೈಕೆ, ಸಾರಿಗೆ ಇತ್ಯಾದಿ ಸಮಸ್ಯೆಯನ್ನು ಬೇರು ಮಟ್ಟದಲ್ಲಿ ಇನ್ನೂ ಸರಿಪಡಿಸಲಾಗಿಲ್ಲ. 2024-25 ರ ವೇಳೆಗೆ 100 ಲಕ್ಷ ಕೋಟಿ ರೂ. ಅನ್ನು ಮೂಲಸೌಕರ್ಯಗಳಿಗೆ ಮೀಸಲಿಡುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳಿಗೆ ಇನ್ನೂ ಚಾಲನೆಯೇ ಸಿಕ್ಕಿಲ್ಲ. ವೇಗವಾಗಿ ಅನುಮತಿಗಳು ಮತ್ತು ಪಾರದರ್ಶಕ ನಿಯಮಾವಳಿಗಳನ್ನು ರೂಪಿಸುವ ಮುಲಕ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಸಿಂಗಾಪುರ ಮತ್ತು ಹಾಂಕಾಂಗ್ ತೀವ್ರವಾಗಿ ಸ್ಪರ್ಧೆ ಒಡ್ಡುತ್ತಿವೆ. ಆದರೆ ಭಾರತ ಇನ್ನೂ ಆಡಳಿತ ವ್ಯವಸ್ಥೆಯಲ್ಲಿನ ಸಮಸ್ಯೆಯಿಂದ ಬಳಲುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡರೆ ಮಾತ್ರ ವಿದೇಶಿ ಹೂಡಿಕೆಯು ಭಾರತಕ್ಕೆ ಹೇರಳವಾಗಿ ಬರಲು ಸಾಧ್ಯ.