2020 ನೇ ಸಾಲಿನ ವಿಶ್ವ ಆಹಾರ ಬಿಕ್ಕಟ್ಟು ವರದಿ ಪ್ರಕಟಗೊಂಡಿದ್ದು, ಜಗತ್ತಿನ 55 ದೇಶಗಳು ಆಹಾರದ ಬಿಕ್ಕಟ್ಟು ಎದುರಿಸುತ್ತಿವೆ ಎಂದು ತಿಳಿದು ಬಂದಿದೆ. 2019ರ ಅಂತ್ಯದ ವೇಳೆಗೆ ವಿಶ್ವದ 55 ರಾಷ್ಟ್ರ ಹಾಗೂ ಪ್ರಾಂತ್ಯಗಳಲ್ಲಿನ ಒಟ್ಟು 135 ಮಿಲಿಯನ್ ಜನ ಆಹಾರದ ತೀವ್ರ ಕೊರತೆ ಅನುಭವಿಸುತ್ತಿದ್ದು, ಹಸಿವಿನ ನಿವಾರಣೆಗೆ ತುರ್ತು ಕ್ರಮಗಳನ್ನು ಕೈಗೊಳ್ಳುವುದು ಅತಿ ಅಗತ್ಯವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ತೀವ್ರ ಆಹಾರ ಕೊರತೆ ಎದುರಿಸುತ್ತಿರುವ 135 ಮಿಲಿಯನ್ ಜನರ ಹೊರತಾಗಿ, ವಿಶ್ವಾದ್ಯಂತ ಇನ್ನೂ 185 ಮಿಲಿಯನ್ ಜನ ಆಹಾರ ಅಭದ್ರತೆಯನ್ನು ಎದುರಿಸುತ್ತಿದ್ದು ತಕ್ಷಣ ಪರಿಹಾರೋಪಾಯಗಳಿಗೆ ಮುಂದಾಗದಿದ್ದಲ್ಲಿ ಇವರೂ ತೀವ್ರ ಆಹಾರ ಕೊರತೆಯ ಪಟ್ಟಿಗೆ ಸೇರಲಿದ್ದಾರೆ. ಕೋವಿಡ್-19 ಜಗತ್ತಿನ ಮೇಲೆ ದಾಳಿ ಮಾಡಿರುವ ಸಂದರ್ಭದಲ್ಲಿ ಆಹಾರ ಭದ್ರತೆಯ ಸವಾಲು ಎದುರಿಸುವುದು ಮತ್ತಷ್ಟು ಕಠಿಣವಾಗಿರುವುದು ಕಳವಳ ಮೂಡಿಸಿದೆ.
ಆಹಾರ ಕೊರತೆ ಎದುರಿಸುತ್ತಿರುವ ಈ 55 ದೇಶಗಳಲ್ಲಿನ 17 ಮಿಲಿಯನ್ ಮಕ್ಕಳು ಪೌಷ್ಟಿಕಾಂಶದ ತೀವ್ರ ಕೊರತೆಯಿಂದ ಅನಾರೋಗ್ಯಕ್ಕೀಡಾಗುತ್ತಿದ್ದಾರೆ ಹಾಗೂ ದೀರ್ಘಕಾಲದ ಪೌಷ್ಟಿಕಾಂಶ ಕೊರತೆಯಿಂದ 75 ಮಿಲಿಯನ್ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ. ಕೋವಿಡ್-19 ಸಂಕಷ್ಟದ ಕಾರಣದಿಂದ 2020 ರಲ್ಲಿ ಹಸಿವಿನ ಸಮಸ್ಯೆಗಳು ಮತ್ತೂ ಹೆಚ್ಚಾಗಲಿರುವುದು ದುರ್ದೈವವಾಗಿದೆ.
ಕೋವಿಡ್ ಲಾಕ್ಡೌನ್ನಿಂದಾಗಿ ವ್ಯಾಪಾರ-ವ್ಯವಹಾರಗಳ ಮೇಲಿನ ನಿರ್ಬಂಧ ಹಾಗೂ ಅರ್ಥವ್ಯವಸ್ಥೆಯ ಕುಸಿತದಿಂದಾಗಿ ರಾಷ್ಟ್ರಗಳ ಬಜೆಟ್ ಗಾತ್ರಗಳು ಕುಗ್ಗಲಿದ್ದು, ಕುಟುಂಬಗಳ ಸರಾಸರಿ ಆದಾಯದಲ್ಲಿ ಭಾರಿ ಇಳಿಕೆಯಾಗಲಿದೆ ಹಾಗೂ ಆಹಾರ ಧಾನ್ಯಗಳ ಬೆಲೆ ವಿಪರೀತ ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇನ್ನು ಸಾರಿಗೆ ಸಂಚಾರದ ನಿರ್ಬಂಧಗಳಿಂದಾಗಿ ಅತ್ಯಗತ್ಯ ಆಹಾರ ಧಾನ್ಯಗಳ ಪೂರೈಕೆ ಜಾಲವೇ ಕುಸಿದು ಬೀಳುವ ಎಲ್ಲ ಸಾಧ್ಯತೆಗಳೂ ಇವೆ. ಅದರಲ್ಲೂ ಬಡ ಹಾಗೂ ಹಿಂದುಳಿದ ದೇಶಗಳಲ್ಲಿ ಹಸಿವಿನ ಸಮಸ್ಯೆ ಅಗಾಧವಾಗಿ ಕಾಡಲಿದೆ. ವಿಶ್ವ ಆಹಾರ ಬಿಕ್ಕಟ್ಟು ವರದಿಯಲ್ಲಿ ಪ್ರಸ್ತಾಪಿಸಲಾಗಿರುವ ಬಹುತೇಕ ದೇಶಗಳು, ಕೋವಿಡ್ ಸಂಕಷ್ಟದ ಸಮಯದಲ್ಲಿ ತನ್ನ ನಾಗರಿಕರನ್ನು ಸುರಕ್ಷಿತವಾಗಿ ಕಾಪಾಡುವುದರೊಂದಿಗೆ ಅವರ ಜೀವನೋಪಾಯವೂ ಸುಗಮವಾಗಿ ಸಾಗುವಂತೆ ಮಾಡುವ ಸಾಮರ್ಥ್ಯ ಹೊಂದಿಲ್ಲ.
ಈಗಾಗಲೇ ಪರಿಹಾರ ಕಾರ್ಯಗಳಲ್ಲಿ ನಿರತ ರಾಷ್ಟ್ರೀಯ, ಪ್ರಾದೇಶಿಕ ಅಥವಾ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಗಳಿಗೆ ಸಮಾಜದ ಕಟ್ಟಕಡೆಯ ದುರ್ಬಲರಿಗೆ ಸಹಾಯ ತಲುಪಿಸುವುದು ತೀರಾ ಕಷ್ಟಕರವಾಗಲಿದೆ. ಅಂಗವಿಕಲರು, ವಯೋವೃದ್ಧರು ಹಾಗೂ ಚಿಕ್ಕಮಕ್ಕಳಿಗೆ ಅಗತ್ಯ ಪರಿಹಾರ ಸಾಮಗ್ರಿಗಳನ್ನು ಮುಟ್ಟಿಸುವುದು ಸವಾಲಾಗಲಿದೆ. ಜಗತ್ತಿನಾದ್ಯಂತ ಪ್ರತಿಯೊಬ್ಬರೂ ಒಂದಿಲ್ಲೊಂದು ರೀತಿಯಲ್ಲಿ ಕೋವಿಡ್ನಿಂದ ಸಂಕಷ್ಟ ಅನುಭವಿಸುತ್ತಿದ್ದು, ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಒಕ್ಕೂಟದ ದೇಶಗಳು (OECD - Organization for Economic Cooperation and Development) ಮತ್ತು ಇತರ ಹೆಚ್ಚಿನ ಆದಾಯದ ರಾಷ್ಟ್ರಗಳು ಸಹ ತೊಂದರೆಗೀಡಾಗಲಿವೆ.
ತಮ್ಮದೇ ದೇಶದಲ್ಲಿನ ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿಗಳು ಹದಗೆಟ್ಟಿರುವಾಗ ಇನ್ನೊಂದು ದೇಶಕ್ಕೆ ಸಹಾಯ ಮಾಡುವುದು ದೂರದ ಮಾತು. ಅಪೌಷ್ಟಿಕಾಂಶ ಹಾಗೂ ಹಸಿವಿನ ಸಮಸ್ಯೆ ನಿವಾರಿಸುವ ಪ್ರಯತ್ನಗಳಿಗೆ ಹಿನ್ನಡೆಯಾಗಲಿದ್ದು, ಜಾಗತಿಕ ಸುಸ್ಥಿರ ಅಭಿವೃದ್ಧಿಯ ಗುರಿ ಸಾಧನೆ ವಿಫಲವಾಗಲಿದೆ.
ಕೋವಿಡ್ ಬಿಕ್ಕಟ್ಟಿನಿಂದಾಗಿ ಆಹಾರ ಭದ್ರತೆಗಾಗಿ ಮೀಸಲಿಡುವ ಹಣಕಾಸು ಮೊತ್ತ ಕಡಿಮೆಯಾಗಲಿದ್ದು, ದುರ್ಬಲ ವರ್ಗದವರು ಪೌಷ್ಟಿಕಾಂಶ ಕೊರತೆ ಹಾಗೂ ಆದಾಯ ಕೊರತೆಯಿಂದ ಬಳಲುವ ಸಂಭವಗಳಿವೆ. ಹೀಗಾಗಿ ವಿಶ್ವ ಆಹಾರ ಬಿಕ್ಕಟ್ಟು ವರದಿಯಲ್ಲಿ ಪ್ರಸ್ತಾಪಿತವಾಗಿರುವ ದೇಶಗಳು ಜೀವ ಹಾಗೂ ಜೀವನಗಳ ಮಧ್ಯೆ ಯಾವುದನ್ನು ಕಾಪಾಡಬೇಕೆಂಬುದರ ಬಗ್ಗೆ ಆಯ್ಕೆ ಮಾಡುವಂತಿಲ್ಲ. ವಿಶ್ವದ ಹಲವಾರು ರಾಷ್ಟ್ರಗಳ ಜನ ಈಗಾಗಲೇ ತೀವ್ರ ಆಹಾರ ಕೊರತೆ ಎದುರಿಸುತ್ತಿದ್ದು, ಅವರೆಲ್ಲರ ಜೀವನ ಹಾಗೂ ಜೀವನೋಪಾಯ ಎರಡಕ್ಕೂ ಆತಂಕ ಎದುರಾಗಿದೆ.
ವಿಶ್ವ ಆಹಾರ ಬಿಕ್ಕಟ್ಟು ವರದಿಯ ಅಂತಾರಾಷ್ಟ್ರೀಯ ಜಾಲವು, ಕೋವಿಡ್ನಿಂದಾಗಿ ಪೌಷ್ಟಿಕಾಂಶ ಹಾಗೂ ಆಹಾರ ಭದ್ರತೆಗಳ ಮೇಲಾಗುತ್ತಿರುವ ಪರಿಣಾಮಗಳ ಮೇಲೆ ಸತತವಾಗಿ ಕಣ್ಣಿಡಲಿದೆ. ಆಹಾರ ಪೂರೈಕೆ ಜಾಲ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವಂತೆ ಹಾಗೂ ಜನರ ಕೈಯಲ್ಲಿ ಹಣಕಾಸು ಲಭ್ಯತೆ ಇರುವಂತೆ ನೋಡಿಕೊಳ್ಳುವುದು ಸರ್ಕಾರಗಳ ಜವಾಬ್ದಾರಿಯಾಗಿದೆ. ಜೊತೆಗೆ ಅತ್ಯಂತ ಮುಖ್ಯವಾಗಿ ಕೃಷಿ ವಲಯ ಯಾವುದೇ ಕಾರಣಕ್ಕೂ ವಿಫಲವಾಗದಂತೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.