ಗುವಾಹಟಿ (ಅಸ್ಸೋಂ): ಪ್ರವಾಹದಿಂದಾಗಿ ಈಶಾನ್ಯ ರಾಜ್ಯದ ಪರಿಸ್ಥಿತಿ ಅಯೋಮಯವಾಗಿದೆ. ಇಲ್ಲಿನ 21 ಜಿಲ್ಲೆಗಳಲ್ಲಿ 4.6 ಲಕ್ಷ ಜನರಿಗೆ ತೀವ್ರ ಸ್ವರೂಪದ ತೊಂದರೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಕಸ ಪ್ರವಾಹ ಇಂದು ಮತ್ತೆರಡು ಜೀವಗಳನ್ನು ಬಲಿ ಪಡೆದುಕೊಂಡಿದೆ.
ಪ್ರವಾಹದ ನೀರಿನಿಂದಾಗಿ ಗೋಲ್ಪಾರ ಜಿಲ್ಲೆಯ ಬಲಿಜಾನಾ ಮತ್ತು ಮಾಟಿಯಾದಲ್ಲಿ ಎರಡು ಸಾವು ವರದಿಯಾಗಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ತನ್ನ ದೈನಂದಿನ ಬುಲೆಟಿನ್ನಲ್ಲಿ ತಿಳಿಸಿದೆ. ಈ ವರ್ಷ ರಾಜ್ಯದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಸಾವಿಗೀಡಾದವರ ಸಂಖ್ಯೆ 18ಕ್ಕೆ ಏರಿದೆ.
ಧೆಮಾಜಿ, ಲಖಿಂಪುರ್, ಬಿಸ್ವಾನಾಥ್, ಉದಲ್ಗುರಿ, ದಾರಂಗ್, ನಲ್ಬಾರಿ, ಬಾರ್ಪೆಟಾ, ಚಿರಾಂಗ್, ಬೊಂಗೈಗಾಂವ್, ಕೊಕ್ರಜಾರ್, ದಕ್ಷಿಣ ಸಲ್ಮಾರಾ, ಗೋಲ್ಪಾರ, ಕಮ್ರೂಪ್ ಹಾಗು ಮೊರಿಗಾಂವ್ ಪ್ರದೇಶಗಳಲ್ಲಿ 4.6 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ತುತ್ತಾಗಿದ್ದಾರೆ ಎಂದು ಎಎಸ್‌ಡಿಎಂಎ ತಿಳಿಸಿದೆ.
ಮಳೆ ನಿರಂತರವಾಗಿ ಸುರಿಯುತ್ತಿರುವ ಕಾರಣ, ದಿಬ್ರುಗರ್ ನಗರ ಸೇರಿದಂತೆ 1,289 ಗ್ರಾಮಗಳು ಮುಳುಗಿವೆ ಹಾಗೂ 37,313.46 ಹೆಕ್ಟೇರ್ ಬೆಳೆ ಪ್ರದೇಶ ಹಾನಿಯಾಗಿದೆ.
ಪ್ರವಾಹಕ್ಕೆ ತುತ್ತಾದ 19,496 ಜನರು ಆಶ್ರಯ ಪಡೆಯಲು 10 ಜಿಲ್ಲೆಗಳಲ್ಲಿ 132 ಪರಿಹಾರ ಶಿಬಿರಗಳು ಮತ್ತು ವಿತರಣಾ ಕೇಂದ್ರಗಳನ್ನು ಅಧಿಕಾರಿಗಳು ನಿರ್ಮಿಸಿದ್ದಾರೆ.