ತೆಲಂಗಾಣ: ಉದ್ಯಮಿಯೊಬ್ಬರ ಮನೆಗೆ ನುಗ್ಗಿ ಬರೋಬ್ಬರಿ 2.5 ಕೋಟಿ ರೂ. ನಗದು ಕದ್ದ ಐವರ ಬಂಧನ ಮಾಡುವಲ್ಲಿ ತೆಲಂಗಾಣ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೀಗ ಅವರಿಂದ 1.28 ಕೋಟಿ ರೂ. ಹಣ ವಶ ಪಡಿಸಿಕೊಂಡಿದ್ದಾರೆ.
ಐವರು ಕಳ್ಳರ ಬಂಧನ ಮಾಡಿರುವ ಹೈದರಾಬಾದ್ ಪೊಲೀಸರು 1.28 ಕೋಟಿ ರೂ ನಗದು, ದ್ವಿಚಕ್ರ ವಾಹನ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಜುಲೈ 22ರ ಮಧ್ಯರಾತ್ರಿ ಆರೋಪಿಗಳು ಉದ್ಯಮಿ ಅಸಾದುದ್ದೀನ್ ಅಹ್ಮದ್ ಅವರ ಮನೆಗೆ ನುಗ್ಗಿ ಈ ಕೃತ್ಯವೆಸಗಿದ್ದರು.
ಆರೋಪಿಗಳನ್ನ ಅಪ್ಸಾರ್(24), ಮಿರ್ಜಾ ಬೇಗ್(22), ಅಮೀರ್(20), ರೆಹಮಾನ್(23) ಹಾಗೂ ಇಮ್ರಾನ್(23) ಎಂದು ಗುರುತಿಸಲಾಗಿದೆ.ಅಸಾದುದ್ದೀನ್ ಜುಲೈ 21ರಂದು ತನ್ನ ಹೆಂಡತಿ ಹಾಗೂ ಮಕ್ಕಳೊಂದಿಗೆ ಸೇರಿ ಶಮಿರ್ಪೇಟ್ನಲ್ಲಿರುವ ತನ್ನ ತೋಟದ ಮನೆಗೆ ಹೋಗಿದ್ದಾರೆ. ಮರುದಿನವೇ ಇವರ ಮನೆಗೆ ನುಗ್ಗಿರುವ ಕಳ್ಳರು ದುಷ್ಕೃತ್ಯವೆಸಗಿದ್ದಾರೆ.
ಜುಲೈ 23ರಂದು ತನ್ನ ಮನೆಗೆ ಹಿಂದುರುಗಿದಾಗ ಘಟನೆ ಬಗ್ಗೆ ಮಾಹಿತಿ ತಿಳಿದು ಬಂದಿದೆ. ತಕ್ಷಣವೇ ಗೋಲ್ಕೊಂಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ತನಿಖೆ ಆರಂಭಿಸಿದ ಪೊಲೀಸರು ಐವರು ಆರೋಪಿಗಳ ಬಂಧನ ಮಾಡಿದ್ದಾರೆ.