ತಿರುವನಂತಪುರಂ: ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಕೇರಳ ರಾಜ್ಯ ಒಂದು ಹೆಜ್ಜೆ ಮುಂದಿಟ್ಟಿದ್ದು, ದೇಶದಲ್ಲೇ ಮೊದಲ ಬಾರಿಗೆ ಪ್ಲಾಸ್ಮಾ ಥೆರಪಿಯ ಕ್ಲಿನಿಕಲ್ ಟ್ರಯಲ್ಸ್ ನಡೆಸಲು ಅನುಮತಿ ಪಡೆದುಕೊಂಡಿದೆ.
ಕೋವಿಡ್ ಸೋಂಕಿನಿಂದ ಗಂಭೀರವಾಗಿ ಬಳಲುತ್ತಿರುವ ರೋಗಿಗಳ ಮೇಲೆ ಪ್ಲಾಸ್ಮಾ ಥೆರಪಿ ಕ್ಲಿನಿಕಲ್ ಟ್ರಯಲ್ಸ್ ನಡೆಸಲು ತಿರುವನಂತಪುರಂ ನ ಶ್ರೀ ಚಿತ್ರಾ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸ್ ಮತ್ತು ಟೆಕ್ನಾಲಜಿ ಸಂಸ್ಥೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಗ್ರೀನ್ ಸಿಗ್ನಲ್ ನೀಡಿದೆ.
ಶ್ರೀ ಚಿತ್ರಾ ಇನ್ಸ್ಟಿಟ್ಯೂಟ್ ಮೊದಲಿಗೆ ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ನಂತರ ಸರ್ಕಾರ ನೇಮಿಸಿದ ಆರೋಗ್ಯ ತಜ್ಞರ ಸಮಿತಿಯು ಪ್ರಸ್ತಾವನೆಯನ್ನು ಐಸಿಎಂಆರ್ಗೆ ಕಳುಹಿಸಿತ್ತು. ಅಂತಿಮವಾಗಿ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ ಅನುಮತಿ ಸಿಕ್ಕ ತಕ್ಷಣ ಚಿತ್ರಾ ಇನ್ಸ್ಟಿಟ್ಯೂಟ್ ಕ್ಲಿನಿಕಲ್ ಟ್ರಯಲ್ ಆರಂಭಿಸಬಹುದಾಗಿದೆ.ಕೋವಿಡ್ನಿಂದ ಸೋಂಕಿತರಾಗಿ ನಂತರ ಸಂಪೂರ್ಣ ಗುಣಮುಖರಾಗಿರುವವರು ರೋಗಿಗಳ ಪ್ಲಾಸ್ಮಾದಿಂದ ಪ್ರತ್ಯೇಕಿಸಲ್ಪಟ್ಟ ಪ್ರತಿಕಾಯಗಳು (antibodies) ಕೋವಿಡ್ ಸೋಂಕಿತ ರೋಗಿಗಳ ಸ್ಥಿತಿಯನ್ನು ಸುಧಾರಿಸಲು ಸಹಾಯಕವಾಗಬಹುದು ಎಂಬ ಅಂಶವನ್ನು ಆಧರಿಸಿ ಸುಸ್ಥಿರ ಪ್ಲಾಸ್ಮಾ ಥೆರಪಿ (convalescent plasma therapy) ಕ್ಲಿನಿಕಲ್ ಟ್ರಯಲ್ಸ್ ಆರಂಭಿಸಲಾಗುತ್ತಿದೆ.
ಕೊಟ್ಟಾಯಂ ಹಾಗೂ ತಿರುವನಂತಪುರಂ ಮೆಡಿಕಲ್ ಕಾಲೇಜುಗಳ ತಜ್ಞ ವೈದ್ಯರು ಮತ್ತು ಕೋಜಿಕ್ಕೋಡ್ ಬೇಬಿ ಮೆಮೋರಿಯಲ್ ಆಸ್ಪತ್ರೆಯ ತುರ್ತು ಆರೈಕೆ ತಜ್ಞ ಡಾ. ಅನೂಪ್ ಕುಮಾರ, ಚಿತ್ರಾ ಇನ್ಸ್ಟಿಟ್ಯೂಟ್ನ ಕ್ಲಿನಿಕಲ್ ಟ್ರಯಲ್ಸ್ಗಳಿಗೆ ಕೈಜೋಡಿಸಿ ಕೆಲಸ ಮಾಡಲಿದ್ದಾರೆ.
ಯಾವುದೇ ವ್ಯಕ್ತಿಯ ದೇಹದಲ್ಲಿ ವೈರಸ್ ದಾಳಿಯಾದಾಗ ದೇಹವು ಸಹಜವಾಗಿಯೇ ಪ್ರತಿಕಾಯಗಳನ್ನು ಬಿಡುಗಡೆ ಮಾಡಿ ವೈರಸ್ನೊಂದಿಗೆ ಹೋರಾಡುತ್ತದೆ. ಪ್ಲಾಸ್ಮಾ ಥೆರಪಿಯು, ಒಂದು ಬಾರಿ ಕೋವಿಡ್-19 ನಿಂದ ಗುಣಮುಖರಾದವರ ದೇಹದಲ್ಲಿ ಕೋವಿಡ್ ವಿರುದ್ಧ ಹೋರಾಡುವ ಪ್ರತಿಕಾಯಗಳು ತಯಾರಾಗಿರುತ್ತವೆ ಎಂಬುದನ್ನು ಆಧರಿಸಿದೆ.