ರೋಹ್ಟಕ್ (ಹರಿಯಾಣ): ಭಾರತದ ಕೋವಿಡ್ ಲಸಿಕೆ ಕೊವಾಕ್ಸಿನ್ ಮಾನವ ಪ್ರಯೋಗದ ಹಂತ-1ರ ಮೊದಲ ಭಾಗವು ಹರಿಯಾಣದ ರೋಹ್ಟಕ್ನ ವೈದ್ಯಕೀಯ ವಿಜ್ಞಾನ ಸ್ನಾತಕೋತ್ತರ ಸಂಸ್ಥೆಯಲ್ಲಿ (ಪಿಜಿಐ) ಶನಿವಾರ ಪೂರ್ಣಗೊಂಡಿದೆ.
ಜುಲೈ17ರಂದು ರೋಹ್ಟಕ್ನ ಪಿಜಿಐನಲ್ಲಿ ಭಾರತದ ಮೊದಲ ದೇಶೀಯ ಲಸಿಕೆ ಕೊವಾಕ್ಸಿನ್‌ನ ಮಾನವ ಪ್ರಯೋಗ ಪ್ರಾರಂಭವಾಯಿತು. ಹಂತ -1ರ ಮೊದಲ ಭಾಗದಲ್ಲಿ ದೇಶಾದ್ಯಂತ 50 ಜನರಿಗೆ ಲಸಿಕೆ ನೀಡಲಾಗಿದ್ದು, ಫಲಿತಾಂಶ ಸಕಾರಾತ್ಮಕವಾಗಿದೆ. ಈಗಾಗಲೇ 2ನೇ ಭಾಗ ಆರಂಭವಾಗಿದ್ದು, ಆರು ಮಂದಿ ಮೇಲೆ ಲಸಿಕೆ ಪ್ರಯೋಗಿಸಲಾಗಿದೆ ಎಂದು ಪಿಜಿಐನ ಲಸಿಕೆ ಪ್ರಯೋಗ ತಂಡದ ಪ್ರಧಾನ ತನಿಖಾಧಿಕಾರಿ ಡಾ.ಸವಿತಾ ವರ್ಮಾ ತಿಳಿಸಿದ್ದಾರೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ (ಬಿಬಿಐಎಲ್) ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಭಾಗಿತ್ವದಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) 'ಕೊವಾಕ್ಸಿನ್' ಹೆಸರಿನ ಕೊರೊನಾ ವೈರಸ್ ಲಸಿಕೆ ಕಂಡು ಹಿಡಿದಿದೆ.
ಕೋವಿಡ್ ಲಸಿಕೆಗಾಗಿ ಮಾನವರ ಮೇಲೆ ಮೊದಲನೇ ಹಾಗೂ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಲು ಭಾರತ್ ಬಯೋಟೆಕ್ಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮತಿ ನೀಡಿದೆ. ಹೀಗಾಗಿ ಲಸಿಕೆಯ ಕ್ಲಿನಿಕಲ್ ಪ್ರಯೋಗವನ್ನು ಆರಂಭಿಸಿರುವ ಭಾರತ್ ಬಯೋಟೆಕ್, ಅಗಸ್ಟ್ 15ರೊಳಗೆ ಇದರ ಫಲಿತಾಂಶವನ್ನು ಬಿಡುಗಡೆ ಮಾಡುವ ಗುರಿ ಹೊಂದಿದೆ.
ಹೈದರಾಬಾದ್ನ ನಿಜಾಮ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ನಿಮ್ಸ್) ಹಾಗೂ ದೆಹಲಿ ಏಮ್ಸ್ನಲ್ಲಿ (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ) ಕೂಡ ಕೊವಾಕ್ಸಿನ್ ಮಾನವನ ಮೇಲಿನ ಪ್ರಯೋಗ ಆರಂಭವಾಗಿದೆ.