ಚಂಡೀಗಢ: ರಾಜ್ಯದ ವಿವಿಧ ಜಿಲ್ಲೆಗಳಿಂದ ಸಂಗ್ರಹಿಸಿದ ಮಾದರಿಗಳು ವಿಫಲವಾದ ಕಾರಣ 14 ಸ್ಯಾನಿಟೈಸರ್ ಬ್ರಾಂಡ್‌ಗಳ ವಿರುದ್ಧ ಹರಿಯಾಣ ಸರ್ಕಾರ ಎಫ್‌ಐಆರ್ ದಾಖಲಿಸಿದೆ. ಇದರೊಂದಿಗೆ ಆಯಾ ಬ್ರಾಂಡ್‌ಗಳ ಪರವಾನಗಿಯನ್ನು ರದ್ದುಗೊಳಿಸಲು ಸಹ ನೋಟಿಸ್ ನೀಡಲಾಗಿದೆ ಎಂದು ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ತಿಳಿಸಿದ್ದಾರೆ.
ಹರಿಯಾಣದ ಆಹಾರ ಮತ್ತು ಔಷಧ ಆಡಳಿತ ಮಂಡಳಿ ಸುಮಾರು 248 ಸ್ಯಾನಿಟೈಸರ್ ಮಾದರಿಗಳನ್ನು ಸಂಗ್ರಹಿಸಿತ್ತು. ಅದರಲ್ಲಿ 123 ಮಾದರಿಗಳ ವರದಿಗಳು ಬಂದಿವೆ. ಈ ಪೈಕಿ 109 ಮಾದರಿಗಳಿಗೆ ಸರ್ಕಾರ ಅನುಮತಿ ನೀಡಿದ್ದು, 14 ಸ್ಯಾಂಪಲ್ಗಳಲ್ಲಿ ದೋಷ ಕಂಡು ಬಂದಿದೆ.
14ರ ಪೈಕಿ ಗುಣಮಟ್ಟವಿಲ್ಲದ 9 ಬ್ರಾಂಡ್‌ಗಳು ಹಾಗೂ ಹೆಚ್ಚಿನ ಪ್ರಮಾಣದ ಮೆಥನಾಲ್ (ವಿಷಕಾರಿ ರಾಸಾಯನಿಕ) ಅಂಶ ಇರುವ 5 ಬ್ರ್ಯಾಂಡ್‌ಗಳ ಲೈಸನ್ಸ್ ರದ್ದುಗೊಳಿಸಿದ್ದು, ಮಾರುಕಟ್ಟೆಯಿಂದ ಅವುಗಳ ಎಲ್ಲ ಸ್ಟಾಕ್ಗಳನ್ನು ಮರಳಿ ಪಡೆಯಲು ಸೂಚನೆ ನೀಡಲಾಗಿದೆ. ಅಲ್ಲದೇ ಕಂಪನಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅನಿಲ್ ವಿಜ್ ಹೇಳಿದ್ದಾರೆ.
ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದಂತೆಯೇ ಮಾರುಕಟ್ಟೆಯಲ್ಲಿ ನಕಲಿ ಸ್ಯಾನಿಟೈಸರ್‌ಗಳ ಮಾರಾಟ ಕೂಡ ಹೆಚ್ಚಾಗಿದೆ. ಈ ಕುರಿತು ದೂರುಗಳು ಬಂದ ಹಿನ್ನೆಲೆ ಹರಿಯಾಣದ ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆಸಲು ಆಹಾರ ಮತ್ತು ಔಷಧ ಆಡಳಿತ ಮಂಡಳಿ ಆದೇಶ ನೀಡಿತ್ತು.