ವಿಜಯವಾಡ (ಆಂಧ್ರಪ್ರದೇಶ): ವಿಜಯವಾಡದಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 10 ಮಂದಿ ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ಆಂಧ್ರಪ್ರದೇಶ ಸರ್ಕಾರ ತಲಾ 50 ಲಕ್ಷ ಪರಿಹಾರ ಘೋಷಿಸಿದೆ.
ಇಂದು ಬೆಳಗ್ಗೆ ಈ ದುರ್ಘಟನೆ ನಡೆದಿದ್ದು, ಭಾರೀ ಬೆಂಕಿಯಿಂದಾಗಿ ದಟ್ಟವಾದ ಹೊಗೆ ಆವರಿಸಿಕೊಂಡಿತ್ತು. ಹೊಗೆಯ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿದ್ದ ಸಂತ್ರಸ್ತರು ಕಿರುಚಾಡುತ್ತ ಕಿಟಕಿಯಿಂದ ಹೊರಬರುತ್ತಿದ್ದ ದೃಶ್ಯಗಳು ಕಂಡುಬಂದಿವೆ. ಘಟನೆಯಲ್ಲಿ 10 ಜನರು ಸಾವಿಗೀಡಾಗಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದು, ಒಳಗೆ ಸಿಲುಕಿದ್ದವರನ್ನು ಆ್ಯಂಬುಲೆನ್ಸ್‌ಗಳ ಮೂಲಕ ಮತ್ತೊಂದು ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ವಿಜಯವಾಡದ ಸ್ವರ್ಣ ಪ್ಯಾಲೇಸ್ ಹೋಟೆಲ್ ಅನ್ನು ಕೋವಿಡ್ ಆರೈಕೆ ಕೇಂದ್ರವಾಗಿ ಬಳಸಲಾಗುತ್ತಿದೆ. ದುರ್ಘಟನೆ ನಡೆದ ಕಟ್ಟಡದಲ್ಲಿ ಸುಮಾರು 30 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು. ಸುಮಾರು 10 ಸಿಬ್ಬಂದಿ ಅವರಿಗೆ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಿದ್ದರು ಎಂದು ತಿಳಿದುಬಂದಿದೆ. ಎನ್ಡಿಆರ್ಎಫ್ ತಂಡವೂ ಕೂಡ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿತ್ತು.
ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಅವರು ಅಗ್ನಿ ಅವಘಡದಲ್ಲಿ ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳು ಬೇಗ ಗುಣಮುಖರಾಗಲೆಂದು ಹಾರೈಸಿದ್ದಾರೆ. ಈ ಬಗ್ಗೆ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಜೊತೆ ಮಾತುಕತೆ ನಡೆಸಿದ್ದು, ಎಲ್ಲಾ ರೀತಿಯ ಸಹಕಾರದ ಭರವಸೆ ನೀಡಿದ್ದಾರೆ.
ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಬೆಂಕಿ ಅವಘಡ ಬಗ್ಗೆ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದು, ಈ ಬಗ್ಗೆ ವಿವರ ಪಡೆದುಕೊಂಡಿದ್ದಾರೆ. ರಕ್ಷಣಾ ಕ್ರಮಗಳನ್ನು ಕೈಗೆತ್ತಿಕೊಳ್ಳಲು ಮತ್ತು ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗಳಲ್ಲಿ ದಾಖಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಸಿಎಂ ಕಚೇರಿ ಮಾಹಿತಿ ನೀಡಿದೆ.