ಬಂಕುರಾ (ಪಶ್ಚಿಮ ಬಂಗಾಳ): ಇಬ್ಬರು ವ್ಯಕ್ತಿಗಳ ಅಂತ್ಯಸಂಸ್ಕಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದ ಆರೋಪದಡಿ ಬಿಜೆಪಿ ಸಂಸದ ಡಾ.ಸುಭಾಷ್ ಸರ್ಕಾರ್ ವಿರುದ್ಧ ಪಶ್ಚಿಮ ಬಂಗಾಳ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕ ಜಯದೀಪ್ ಚಟ್ಟೋಪಾಧ್ಯಾಯ ಅವರು ನೀಡಿದ ದೂರು ಆಧರಿಸಿ ಬಂಕುರಾ ಸರ್ದಾರ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಸಂಸದನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಧಿಕಾರಿಗಳು ಕೊರೊನಾ ಸೋಂಕಿತ ಇಬ್ಬರ ಮೃತ ದೇಹಗಳನ್ನು ಅಂತ್ಯಕ್ರಿಯೆ ಮಾಡಿದ್ದು ತಪ್ಪು ಎಂದು ಸಂಸದ ಸುಭಾಷ್ ಸರ್ಕಾರ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದ ಟಿಎಂಸಿ ನಾಯಕ ಜಯದೀಪ್, ವೈದ್ಯರೂ ಆಗಿರುವ ಬಿಜೆಪಿ ಸಂಸದ ಸುಭಾಷ್ ಸರ್ಕಾರ್ ಯಾವುದೇ ವರದಿಯನ್ನು ನೋಡದೇ ಹೀಗೆ ಸುಳ್ಳು ಸುದ್ದಿಯನ್ನು ಹರಡಿಸಿದ್ದು ಸರಿಯಲ್ಲ ಎಂದಿದ್ದಾರೆ.
ಇದಕ್ಕೆ ಮತ್ತೆ ತಿರುಗೇಟು ನೀಡಿರುವ ಬಿಜೆಪಿ ಸಂಸದ, ಕೋವಿಡ್ 19 ಪರೀಕ್ಷೆಯ ವರದಿ ಬರುವ ಮುನ್ನವೇ ಮೃತರ ದೇಹಗಳನ್ನು ಅಂತ್ಯಕ್ರಿಯೆ ಮಾಡಿದ್ದೇಕೆ ಅಂತ ಪ್ರಶ್ನಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಇಬ್ಬರ ಮೃತದೇಹಗಳನ್ನು ಏಪ್ರಿಲ್ 12 ರಂದು ಮಧ್ಯರಾತ್ರಿ ಅಂತ್ಯಕ್ರಿಯೆ ಮಾಡಲಾಗಿತ್ತು. ಕುಟುಂಬದವರಿಗೆ ಮೃತದೇಹಗಳನ್ನು ಹಸ್ತಾಂತರ ಮಾಡಿರಲಿಲ್ಲ.