ಗಾಜಿಯಾಬಾದ್(ಉತ್ತರ ಪ್ರದೇಶ): ಭಾರತೀಯ ವಾಯುಪಡೆ (ಐಎಎಫ್) ಮತ್ತು ಯುನೈಟೆಡ್ ಕಿಂಗ್‌ಡಂನ ರಾಯಲ್ ಏರ್ ಫೋರ್ಸ್ (ಆರ್‌ಎಎಫ್) ನಡುವಿನ ಜಂಟಿ ಸಮರಾಭ್ಯಾಸದ ಐದನೇ ಆವೃತ್ತಿ ಇಂದು ಇಲ್ಲಿನ ಹಿಂಡನ್ ವಾಯುಪಡೆ ಸ್ಟೇಷನ್‌ನಲ್ಲಿ ಮುಕ್ತಾಯವಾಯಿತು.
ಜಂಟಿ ಸಮರಾಭ್ಯಾಸ ಇಂದ್ರಧನುಷ್-ವಿನಲ್ಲಿ ಭಾಗವಹಿಸಿದ್ದ ಪಡೆಗಳಿಗೆ ವಿಶೇಷ ಕಾರ್ಯಾಚರಣೆಗಳನ್ನು ನಡೆಸಲು ಬೇಕಾದ ಪರಿಣತಿಯನ್ನು ಹೆಚ್ಚಿಸುವ ಬಗ್ಗೆ ತರಭೇತಿ ನಡೆಯಿತು. ಜೊತೆಗೆ ಎರಡೂ ಪಡೆಗಳು ಜ್ಞಾನ ಮತ್ತು ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಕಾರ್ಯಕ್ರಮದ ಸಂಪೂರ್ಣ ಲಾಭ ಪಡೆದುಕೊಂಡವು.
ಇಂದ್ರಧನುಷ್-ವಿ, ಐಎಎಫ್ ಮತ್ತು ಆರ್‌ಎಎಫ್ ವಾಯುಪಡೆ ನಡುವಿನ ಜಂಟಿ ಸಮರಾಭ್ಯಾಸವಾಗಿದ್ದು, ಉಭಯ ದೇಶಗಳ ವಾಯುಪಡೆಗಳ ಸಂಬಂಧ ಬಲಪಡಿಸಿ ಕಾರ್ಯಾಚರಣೆಯ ಸಾಮರ್ಥ್ಯ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ತಂತ್ರಗಳು ಮತ್ತು ಸಮರ ಕಾರ್ಯವಿಧಾನಗಳನ್ನು ವಿನಿಮಯ ಮಾಡಿಕೊಳ್ಳುವುದು ಈ ಸಮರಭ್ಯಾಸದ ಗುರಿಯಾಗಿದೆ.
ಫೆಬ್ರವರಿ 24 ರಂದು ಪ್ರಾರಂಭವಾದ ಸಮರಾಭ್ಯಾಸ ಕಾರ್ಯಕ್ರಮ ಇಂದು ಮುಕ್ತಾಯಗೊಂಡಿದೆ.