ಗಾಝಿಯಾಬಾದ್ : ರಾಜಧಾನಿ ನವದೆಹಲಿಗೆ ಹೊಂದಿಕೊಂಡಿರುವ ಗಾಝಿಯಾಬಾದ್ನ ಟ್ರೊನಿಕಾ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಚಮನ್ ವಿಹಾರ್ ಕೊಳಗೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಅನಿಲ ಸಿಲಿಂಡರ್ನಲ್ಲಿ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗ್ತಿದೆ. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಬಂದ ಹತ್ತು ಅಗ್ನಿಶಾಮಕ ವಾಹನ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ.
ಹೆಚ್ಚಿನ ಜನರು ಸುರಕ್ಷಿತ ಸ್ಥಳಗಳಿಗೆ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳಿದವರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಕೊಳಗೇರಿಯ ಸುಮಾರು 100ಕ್ಕೂ ಅಧಿಕ ಗುಡಿಸಲುಗಳು ಬೆಂಕಿಗಾಹುತಿಯಾಗಿವೆ ಎಂದು ತಿಳಿದು ಬಂದಿದೆ. ಘಟನೆಗೆ ನಿಖರ ಕಾರಣ ಏನು ಎಂಬುದು ತಿಳಿದಿಲ್ಲ.
ಬೆಂಕಿ ಅವಘಡದಿಂದ ಕೊಳಗೇರಿ ನಿವಾಸಿಗಳ ಮನೆಗಳಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟು ಕರಲಾಗಿವೆ. ಸ್ಥಳೀಯಾಡಳಿತ ಸಂತ್ರಸ್ತರಿಗೆ ವಸತಿ, ಆಹಾರದ ವ್ಯವಸ್ಥೆ ಮಾಡಿದೆ.
ಬೆಂಕಿಯ ಕೆನ್ನಾಲಿಗೆಗೆ ಅಕ್ಕ-ಪಕ್ಕದ ಕಾಲೋನಿಗಳಲ್ಲೂ ಹೊಗೆ ಆವರಿಸಿ ಜನ ಪರದಾಡುವಂತಾಯಿತು. ಘಟನೆಯಲ್ಲಿ ಎರಡು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸಿಕೊಡುವುದು ಆಡಳಿತಕ್ಕೆ ಸವಾಲಾಗಿದೆ.