ದಮೋಹ್ (ಮಧ್ಯ ಪ್ರದೇಶ): ಹೆಲ್ಮೆಟ್ ಧರಿಸದ ಕಾರಣ ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದು ಮಗ ಮೃತಪಟ್ಟಿದ್ದರಿಂದ ನೊಂದ ತಂದೆ, ಮಗನ ತಿಥಿ ದಿನದಂದು ಯುವಕರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸಿದ್ದಾರೆ.
ತಂದೆ ಮಹೇಂದ್ರ ದೀಕ್ಷಿತ್ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಶಾಲೆಯನ್ನು ಅವರ ಪುತ್ರ ವಿಭಂಶು ಅಲಿಯಾಸ್ ಲಕ್ಕಿ ದೀಕ್ಷಿತ್ ನಡೆಸುತ್ತಿದ್ದರು. ನವೆಂಬರ್ 21 ರಂದು ಕೆಲಸ ಮುಗಿಸಿ ಶಾಲೆಯಿಂದ ಹಿಂದಿರುಗಿ ಬರುವಾಗ ರಸ್ತೆ ಮಧ್ಯದಲ್ಲಿ ಪ್ರಾಣಿಯೊಂದಕ್ಕೆ ಲಕ್ಕಿ ದೀಕ್ಷಿತ್ರ ಬುಲೆಟ್ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆ ಮೇಲೆ ಬಿದ್ದ ದೀಕ್ಷಿತ್ ತಲೆಗೆ ಬಲವಾದ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವ ಆದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೆಲ್ಮೆಟ್ ಧರಿಸದ ಕಾರಣ ದೀಕ್ಷಿತ್ ಪ್ರಾಣ ಕಳೆದುಕೊಳ್ಳಬೇಕಾಯಿತು. ಇದರಿಂದ ನೊಂದ ತಂದೆ ಮಹೇಂದ್ರ ದೀಕ್ಷಿತ್, ಮಗನ ತಿಥಿಯ ದಿನದಂದು 18 ವರುಷ ದಾಟಿದ ಯುವಕರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸಿ, ಯಾವಾಗಲೂ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸಿ ಎಂದು ಸಲಹೆ ನೀಡಿದ್ದಾರೆ.
ಆ ದಿನ ನನ್ನ ಮಗ ಹೆಲ್ಮೆಟ್ ಧರಿಸಿ ಇದ್ದಿದ್ದರೆ ಅವನ ಪ್ರಾಣವನ್ನು ಉಳಿಸಿಕೊಳ್ಳಬಹುದಾಗಿತ್ತು. ನನ್ನ ಮಗನಿಗೆ ಬಂದ ಪರಿಸ್ಥಿತಿ ಇನ್ನಾರಿಗೂ ಬರಬಾರದೆಂಬ ಕಾರಣಕ್ಕೆ ಈ ಕಾರ್ಯಕ್ಕೆ ಮುಂದಾಗಿದ್ದೇನೆ. ನಿಮ್ಮ ಮಕ್ಕಳನ್ನು ಹೆಲ್ಮೆಟ್ ಇಲ್ಲದೆ ಮನೆಯಿಂದ ಹೊರಡಲು ಬಿಡಬೇಡಿ ಎಂದು ಮಹೇಂದ್ರ ದೀಕ್ಷಿತ್ ಪೋಷಕರಲ್ಲಿ ಮನವಿ ಮಾಡಿದ್ದಾರೆ. ಇನ್ನು ಇವರ ಕಾರ್ಯಕ್ಕೆ ಜಿಲ್ಲಾಧಿಕಾರಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.