ಚಿತ್ತೂರು(ಆಂಧ್ರಪ್ರದೇಶ): ಕಟ್ಟಿಕೊಂಡ ಹೆಂಡತಿ ಬೇರೆ ವ್ಯಕ್ತಿ ಜತೆ ಅಕ್ರಮ ಸಂಬಂಧ ಹೊಂದಿದ್ದರಿಂದ ಮನನೊಂದ ವ್ಯಕ್ತಿಯೋರ್ವ ತನ್ನ ಮಗಳನ್ನು ನೇಣುಹಾಕಿ, ತದನಂತರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ.
ಕೊರಿಯರ್ ಡೆಲಿವರಿ ಬಾಯ್ ಆಗಿ ಗಣೇಶ್ ಕೆಲಸ ಮಾಡ್ತಿದ್ದನು. ನಿನ್ನೆ ರಾತ್ರಿ ಖಾಸಗಿ ಹೊಟೆಲ್ ರೂಂನಲ್ಲಿ ಐದು ವರ್ಷದ ಮಗಳನ್ನ ಗಲ್ಲಿಗೇರಿಸಿದ ಬಳಿಕ ಆತನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವೇಳೆ ವಿಡಿಯೋ ಮಾಡಿರುವ ಆತ, ಹೆಂಡತಿ ಅಕ್ರಮ ಸಂಬಂಧದಿಂದ ಮನನೊಂದು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾನೆ.
ಗಣೇಶ್ ಹೆಂಡತಿ ದಿವ್ಯಾ ಅಕ್ರಮ ಸಂಬಂಧ ಹೊಂದಿದ್ದಳಂತೆ. ಇದಕ್ಕೆ ಸಂಬಂಧಿಸಿದಂತೆ ಅನೇಕ ಸಲ ಆತ ಪ್ರಶ್ನೆ ಮಾಡಿದ್ದನು. ಜತೆಗೆ ಪಂಚಾಯ್ತಿ ನಡೆಸಿ ಬುದ್ಧಿವಾದ ಹೇಳಿದ್ರೂ ಕೂಡ ಆಕೆ ತನ್ನ ವರಸೆ ಮುಂದುವರಿಸಿದ್ದಳು ಎಂದು ತಿಳಿಸಿದ್ದಾನೆ. ಜತೆಗೆ ತನ್ನ 5 ವರ್ಷದ ಮಗಳು ಕಾರ್ತಿಕಾ ಕೂಡ ದಿವ್ಯಾ ಬಾಯ್ಫ್ರೆಂಡ್ನಿಂದ ಅನೇಕ ಸಲ ಲೈಂಗಿಕ ಕಿರುಕುಳಕ್ಕೊಳಗಾಗಿದ್ದಾಗಿ ಹೇಳಿದ್ದಾನೆ.
ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುಂಚಿತವಾಗಿ ಆತ ಮಾಡಿರುವ ವಿಡಿಯೋ ಗೆಳೆಯರ ಮೊಬೈಲ್ಗೆ ಹರಿಬಿಟ್ಟಿದ್ದಾನೆ. ಇದಾದ ಬಳಿಕ ಆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಹೊಟೆಲ್ ರೂಂನಿಂದ ಮೃತದೇಹ ವಶಪಡಿಸಿಕೊಂಡಿರುವ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಅಸ್ಪತ್ರೆಗೆ ರವಾನೆ ಮಾಡಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.