ಸಮಸ್ತಿಪುರ(ಬಿಹಾರ): ತಡರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ತಂದೆ ಮಗನ ಮೇಲೆ ನಿರ್ದಾಕ್ಷಿಣ್ಯವಾಗಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ಇಲ್ಲಿನ ಉಜಿಯಾರ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಹೇಸರಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ತಂದೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹೇಸರಿ ಗ್ರಾಮದ ನಿವಾಸಿ ವೀರೇಂದ್ರ ಪಾಸ್ವಾನ್, ನಾಗರಪಂಚಮಿ ದಿನದಂದು ಗ್ರಾಮದ ಕೆಲವು ಯುವಕರೊಂದಿಗೆ ಗಲಾಟೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸೇಡು ತೀರಿಸಿಕೊಳ್ಳಲು ಮುಂದಾದ ದುಷ್ಕರ್ಮಿಗಳು ರಾತ್ರೋರಾತ್ರಿ ಮನೆಗೆ ನುಗ್ಗಿ ಮಲಗಿದ್ದ ವೀರೇಂದ್ರ ಪಾಸ್ವಾನ್ ಹಾಗೂ ಆತನ ಮಗ ರೂಪೇಶ್ ಮೇಲೆ ದಾಳಿ ನಡೆಸಿದ್ದಾರೆ.
ಘಟನೆಯ ವೇಳೆ ಗುಂಡಿನ ಶಬ್ದ ಕೇಳಿ ಹೊರಬಂದ ಗ್ರಾಮಸ್ಥರು, ಚಿಕಿತ್ಸೆಗಾಗಿ ತಂದೆ ಮಗನನ್ನು ಸದರ್ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಅದಾಗಲೇ ವೀರೇಂದ್ರ ಪಾಸ್ವಾನ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ರೂಪೇಶ್ಗೆ ಪ್ರಥಮ ಚಿಕಿತ್ಸೆ ನೀಡಿ ಡಿಎಂಸಿಎಚ್‌ಗೆ ಕಳುಹಿಸಲಾಯಿತು.
ಘಟನೆಯಿಂದ ಪಾಸ್ವಾನ್ ಕುಟುಂಬಸ್ಥರು ಕಂಗಾಲಾಗಿದ್ದು, ಅಪರಾಧಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ. ಇನ್ನು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.