ನವದೆಹಲಿ: ದೇಶದಲ್ಲಿ ಫಾಸ್ಟ್‌ಟ್ಯಾಗ್ ಬಳಕೆದಾರರ ಸಂಖ್ಯೆ ಈ ವರ್ಷ ಶೇಕಡಾ 400ರಷ್ಟು ಬೆಳವಣಿಗೆ ಕಂಡಿದ್ದು, ಈಗ ಒಟ್ಟು ಎರಡು ಕೋಟಿ ಮಂದಿ ಫಾಸ್ಟ್‌ಟ್ಯಾಗ್ ಅನ್ನು ಬಳಸುತ್ತಿದ್ದಾರೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಬುಧವಾರ ಮಾಹಿತಿ ನೀಡಿದೆ.
ದೇಶದಲ್ಲಿ ಫಾಸ್ಟ್‌ಟ್ಯಾಗ್ ಬಳಕೆದಾರರು ದಿನೇ ದಿನೇ ಏರಿಕೆಯಾಗುತ್ತಿದ್ದು, ಇದರಿಂದ ಒಟ್ಟು ಟೋಲ್ ಸಂಗ್ರಹ ದಿನಕ್ಕೆ 92 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಒಂದು ವರ್ಷದ ಹಿಂದೆ ಟೋಲ್ ಸಂಗ್ರಹ 70 ಕೋಟಿ ರೂಪಾಯಿ ಇತ್ತು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಪಷ್ಟನೆ ನೀಡಿದೆ.
ಈಗಿನ ಪ್ರಸ್ತುತ ಅಂಕಿ ಅಂಶಗಳ ಪ್ರಕಾರ ಒಟ್ಟು ಟೋಲ್ ಸಂಗ್ರಹದ ಶೇಕಡಾ 75ರಷ್ಟು ಫಾಸ್ಟ್ಟ್ಯಾಗ್ನಿಂದಲೇ ಬರುತ್ತಿದೆ. ಟೋಲ್ಗೇಟ್ಗಳಲ್ಲಿ ವಾಹನಗಳ ದಟ್ಟಣೆ ತಪ್ಪಿಸಲು, ಟೋಲ್ ಸಂಗ್ರಹಣೆಯ ವೇಗ ಹೆಚ್ಚಿಸುವ ಸಲುವಾಗಿ ನಗದು ರಹಿತ ವಹಿವಾಟಿಗಾಗಿ ಫಾಸ್ಟ್ ಟ್ಯಾಗ್ ಅನ್ನು ಜಾರಿಗೊಳಿಸಲಾಗಿತ್ತು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೇಕಡಾ ನೂರರಷ್ಟು ನಗದು ರಹಿತ ವಹಿವಾಟಿನತ್ತ ಗಮನ ಹರಿಸಲು ಪಾಸ್ಟ್ಟ್ಯಾಗ್ ಅನ್ನು ಅಳವಡಿಸಿಕೊಳ್ಳಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಹೆದ್ದಾರಿಗಳ ಪ್ರಯಾಣಿಕರ ಸಹಕಾರದಿಂದಾಗಿ ಫಾಸ್ಟ್‌ಟ್ಯಾಗ್ ಬಳಕೆದಾರರಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ಎನ್‌ಎಚ್‌ಎಐ ಅಭಿಪ್ರಾಯಪಟ್ಟಿದೆ.
ಕೊರೊನಾ ಸೋಂಕಿನ ಕಾರಣಕ್ಕೆ ಇತ್ತೀಚೆಗೆ ಸಾಮಾಜಿಕ ಅಂತರವೂ ಕೂಡಾ ಅವಶ್ಯಕತೆ ಇರುವ ಕಾರಣದಿಂದ ಟೋಲ್ ಫ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಬಳಕೆಗೆ ಮತ್ತಷ್ಟು ಉತ್ತೇಜನ ದೊರೆತಿದೆ. ಟೋಲ್ ಆಪರೇಟರ್ಗಳು ಹಾಗೂ ವಾಹನ ಚಾಲಕರ ನಡುವೆ ಸುರಕ್ಷಿತ ಭಾವ ಒದಗಿಸುತ್ತಿದೆ.