ಪಾಟ್ನಾ (ಬಿಹಾರ): ಗೋಧಿ ಬೆಳೆ ಕೊಯ್ಲು ಮಾಡಲು ಪಂಜಾಬ್ ಮತ್ತು ಹರಿಯಾಣದಿಂದ ನಿರ್ವಾಹಕರು ಹಾಗೂ ತಂತ್ರಜ್ಞರನ್ನು ಕರೆತರಲು ಬಿಹಾರದ ರೈತರಿಗೆ 750ಕ್ಕೂ ಹೆಚ್ಚು ಅಂತರಾಜ್ಯ ಕರ್ಫ್ಯೂ ಪಾಸ್ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಸುಶೀಲ್‌ಕುಮಾರ್ ಮೋದಿ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಿಹಾರದ ಹೆಚ್ಚಿನ ರೈತರು ರಾಜ್ಯ ಸರ್ಕಾರದ ಕೃಷಿ ಉಪಕರಣಗಳಿಗೆ ನೀಡುವ ಸಬ್ಸಿಡಿಯ ಸಹಾಯದಿಂದ ಕೊಯ್ಲು ಮಾಡುವ ಉಪಕರಣಗಳನ್ನು ಖರೀದಿಸಿದ್ದಾರೆ. ಆದರೆ, ಅವುಗಳ ಮೂಲಕ ಕೊಯ್ಲು ಮಾಡಲು ನಿರ್ವಾಹಕರು ಮತ್ತು ತಂತ್ರಜ್ಞರ ಕೊರತೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಅವರು ಪಂಜಾಬ್ ಮತ್ತು ಹರಿಯಾಣದಿಂದ ತಜ್ಞರನ್ನು ಕರೆಸಿಕೊಳ್ಳಬೇಕಾಗಿದೆ ಎಂದು ಸುಶೀಲ್‌ಕುಮಾರ್ ಮೋದಿ ಹೇಳಿದರು.
ಕೊರೊನಾ ವೈರಸ್ನಿಂದಾಗಿ ಏಕಾಏಕಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೊಷಣೆಯಾಗಿದ್ರಿಂದಾಗಿ ರೈತರಿಗೆ ಸಮಸ್ಯೆಯಾಗಿದೆ. ಹೀಗಾಗಿ ರಾಜ್ಯ ಸರ್ಕಾರವು ಅನೇಕ ರೈತರಿಗೆ ಗೋಧಿ ಬೆಳೆ ಕೊಯ್ಲು ಮಾಡಿಸಲು ಅಂತರಾಜ್ಯ ಕರ್ಫ್ಯೂ ಪಾಸ್ ನೀಡಿದೆ ಎಂದು ಉಪಮುಖ್ಯಮಂತ್ರಿ ಹೇಳಿದರು. ಪಾಸ್ಗಳೊಂದಿಗೆ ಹಲವಾರು ರೈತರು ತಮ್ಮ ಖಾಸಗಿ ವಾಹನಗಳಲ್ಲಿ ಪಂಜಾಬ್ ಮತ್ತು ಹರಿಯಾಣದಿಂದ ಕೊಯ್ಲು ಮಾಡುವ ನಿರ್ವಾಹಕರು ಮತ್ತು ತಂತ್ರಜ್ಞರನ್ನು ಕರೆತರಲು ಹೊರಟಿದ್ದಾರೆ ಎಂದರು.
ಮುಂದಿನ ವರ್ಷದಿಂದ ಕೊಯ್ಲು ಮಾಡುವ ಯಂತ್ರಗಳನ್ನು ನಿರ್ವಹಿಸಲು ರಾಜ್ಯ ಸರ್ಕಾರವೇ ರೈತರಿಗೆ ತರಬೇತಿ ನೀಡಿಲಿದೆ ಎಂದು ಸುಶೀಲ್‌ಕುಮಾರ್ ಹೇಳಿದರು. ಲಾಕ್‌ಡೌನ್ ಇದ್ದರೂ ರೈತರಿಗೆ ರಸಗೊಬ್ಬರ, ಕೀಟನಾಶಕಗಳು, ಬೀಜಗಳು, ಕೃಷಿ ಉಪಕರಣಗಳು, ಟ್ರಾಕ್ಟರ್ ಸೇರಿ ಕೃಷಿಗೆ ಅಗತ್ಯವಿರುವ ವಸ್ತುಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.