ನವದೆಹಲಿ : ಕೃಷಿ ಸಂಬಂಧಿತ ಮಸೂದೆಗಳ ವಿರುದ್ಧ ವಿಪಕ್ಷಗಳು ತಮ್ಮ ಹೋರಾಟ ಸದ್ಯಕ್ಕೆ ನಿಲ್ಲಿಸುವ ಲಕ್ಷಣಗಳು ಕಾಣಿಸುತ್ತಿಲ್ಲ. ಇಂದು ಕೂಡ ಸಂಸತ್ ಆವರಣದಲ್ಲಿ ವಿಪಕ್ಷ ಸದಸ್ಯರು ಪ್ರತಿಭಟನೆ ಮಾಡುತ್ತಿದ್ದಾರೆ.
ಮೇಲ್ಮನೆ ವಿಪಕ್ಷ ನಾಯಕ ಕಾಂಗ್ರೆಸ್‌ನ ಗುಲಾಂ ನಬಿ ಆಜಾದ್, ಡೇರೆಕ್ ಒಬ್ರಿಯನ್ ಸೇರಿ ಹಲವು ವಿಪಕ್ಷ ಸದಸ್ಯರು ಸಂಸತ್ ಆವರಣದ ಗಾಂಧಿ ಪ್ರತಿಮೆ ಎದುರು ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ಸೇವ್ ಫಾರ್ಮರ್ಸ್ (ರೈತರನ್ನು ಉಳಿಸಿ), ಸೇವ್ ವರ್ಕಸ್ (ಕಾರ್ಮಿಕರನ್ನು ಉಳಿಸಿ), ಸೇವ್ ಡೆಮಾಕ್ರಸಿ (ಪ್ರಜಾಪ್ರಭುತ್ವನ್ನು ಉಳಿಸಿ) ಎಂಬ ಘೋಷಣೆಗಳನ್ನು ಕೂಗಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ರಾಜ್ಯಸಭೆ ಕಲಾಪವನ್ನು ಬಹಿಷ್ಕರಿಸಿರುವ ವಿರೋಧ ಪಕ್ಷದ ಸದಸ್ಯರು, ಕೃಷಿ ಮಸೂದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ. ಜೊತೆಗೆ 8 ಸದಸ್ಯರ ಅಮಾನತನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಇಂದು ಸಂಜೆ 5 ಗಂಟೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ವಿಪಕ್ಷ ನಾಯಕರು ಭೇಟಿ ಮಾಡಲಿದ್ದಾರೆ.