ಜಶಪುರ್ : ಲಾಕ್‌ಡೌನ್‌ನಿಂದಾಗಿ ಬೆಳೆದ ಟೊಮ್ಯಾಟೊವನ್ನು ಮಾರುಕಟ್ಟೆಗೆ ತಲುಪಿಸಲು ಸಾಧ್ಯವಾಗದೆ ಹೊಲದಲ್ಲಿರುವ ಟೊಮ್ಯಾಟೊ ಕೊಳೆಯಲಾರಂಭಿಸಿವೆ. ಇದರಿಂದ ಕಂಗಾಲಾಗಿರುವ ರೈತರು ಟೊಮ್ಯಾಟೊವನ್ನು ದನಕರುಗಳಿಗೆ ನೀಡುತ್ತಿದ್ದಾರೆ.
ರೈತರು ಈ ಪ್ರದೇಶದಲ್ಲಿ ಅಧಿಕ ಪ್ರಮಾಣದಲ್ಲಿ ಟೊಮ್ಯಾಟೊ ಬೆಳೆಯುತ್ತಾರೆ. ಈ ವರ್ಷವೂ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ಇಲ್ಲಿನ ರೈತರು ಸಾಕಷ್ಟು ಟೊಮ್ಯಾಟೊ ಬೀಜ ಬಿತ್ತಿದ್ದರು. ಮಾರ್ಚ್ ತಿಂಗಳ ಹೊತ್ತಿಗೆ ರೈತರು ಎರಡು ಬಾರಿ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಹಣ್ಣುಗಳನ್ನ ಮಾರಾಟ ಮಾಡಬೇಕಿತ್ತು. ಆದರೆ, ಲಾಕ್‌ಡೌನ್‌ನಿಂದಾಗಿ ಮಾರುಕಟ್ಟೆ ಸಿಗದೆ ರೈತ ಕಂಗಾಲಾಗಿದ್ದಾರೆ.
ಲಾಕ್‌ಡೌನ್‌ನಿಂದಾಗಿ ತರಕಾರಿ ಮಾರುಕಟ್ಟೆಯನ್ನು ಷರತ್ತುಗಳೊಂದಿಗೆ ತೆರೆಯಲು ಅನುಮತಿ ನೀಡಲಾಗಿತ್ತು. ಆದರೆ, ಜಿಲ್ಲೆಯಲ್ಲಿ ಕೊರೊನಾ ರೋಗಿಗಳ ಸಂಖೈ ನಿರಂತರ ಹೆಚ್ಚುತ್ತಿರುವುದರಿಂದ ಜಶಪುರ್ವನ್ನು ಕೆಂಪು ವಲಯವೆಂದು ಘೋಷಿಸಲಾಗಿದೆ. ಜೊತೆಗೆ ಜಶಪುರದಲ್ಲಿ ಅನೇಕ ಪ್ರದೇಶಗಳನ್ನು ಕಂಟೇನ್ಮೆಂಟ್ ವಲಯವನ್ನಾಗಿ ಮಾಡಲಾಗಿರುವುದರಿಂದ ಬಹುತೇಕ ತರಕಾರಿ ಅಂಗಡಿಗಳು ಬಂದ್ ಇರುವುದರಿಂದ ವ್ಯಾಪಾರ ನಿಂತಿದೆ.
ಉದಯನಗರ ಪಂಚಾಯತ್ ಪ್ರದೇಶದ ಗಡಿಯಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ರೈತರು ಲಕ್ಷಾಂತರ ರೂ. ಖರ್ಚು ಮಾಡಿ ಟೊಮ್ಯಾಟೊ ಬೆಳೆದಿದ್ದರು. ಆದರೆ, ಲಾಕ್‌ಡೌನ್ ಸಮಯದಲ್ಲಿ ಬೆಳೆ ಮಾರಾಟ ಮಾಡುವುದು ರೈತರಿಗೆ ಸಮಸ್ಯೆಯಾಗಿದೆ. ನೊಂದ ರೈತರು ತಮ್ಮ ಜಮೀನಿನಲ್ಲೇ ಚೀಲವೊಂದಕ್ಕೆ 10 ರೂ. ಮಾಡಿ ಮಾರಾಟ ಮಾಡಿದರು. ಆದರೆ, ಅದರಿಂದ ಯಾವುದೇ ಲಾಭವಾಗದಿದ್ದರಿಂದ ದನಕರುಗಳಿಗೆ ನೀಡುತ್ತಿದ್ದಾರೆ.
ಕೊರೊನಾ ಮತ್ತು ಮಳೆಯಿಂದಾಗಿ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಜಿಲ್ಲಾ ತೋಟಗಾರಿಕೆ ಅಧಿಕಾರಿ ಆರ್ ಎ ಎಸ್ ಭಡೋರಿಯಾ ತಿಳಿಸಿದ್ದಾರೆ. ಟೊಮ್ಯಾಟೊ ಮತ್ತು ಇತರ ಬೆಳೆಗಳನ್ನು ಬೆಳೆದ ರೈತರು ಆತಂಕಕ್ಕೊಳಗಾಗಿದ್ದಾರೆ. ಪ್ರಸಕ್ತ ಋತುವಿನಲ್ಲಿ ಸುಮಾರು 400 ಹೆಕ್ಟೇರ್ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆಯಲಾಗಿದೆ. ಇದರಲ್ಲಿ ಅಂದಾಜು 2 ಸಾವಿರ ಮೆಟ್ರಿಕ್ ಟನ್ ಉತ್ಪಾದನೆ ನಿರೀಕ್ಷಿಸಲಾಗಿದೆ. ಕೊರೊನಾ ಬಿಕ್ಕಟ್ಟು ಮತ್ತು ಲಾಕ್‌ಡೌನ್‌ನಿಂದಾಗಿ ಹಣ್ಣುಗಳ ಮಾರಾಟಕ್ಕೆ ತೊಂದರೆಯಾಗಿದೆ ಎಂದು ಅವರು ಹೇಳಿದರು.