ನವದೆಹಲಿ : ಕೇಂದ್ರ ಸರ್ಕಾರ ಸಂಸತ್ನಲ್ಲಿ ಮಂಡಿಸಿದ ಎರಡು ಕೃಷಿ ಸಂಬಂಧಿತ ಮಸೂದೆಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ತೃಣಮೂಲ ಕಾಂಗ್ರೆಸ್(ಟಿಎಂಸಿ) ಪಕ್ಷದ ಸಂಸದರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ರಾಜ್ಯಸಭೆಯಲ್ಲಿ ಸಭಾಧ್ಯಕ್ಷರ ಪೀಠದ ಬಳಿ ಹತ್ತಿದ ಸಂಸದರು, ಪ್ರಸ್ತಾವಿತ ಮಸೂದೆಗಳನ್ನು ಪರಿಶೀಲನೆಗಾಗಿ ಸದನ ಸಮಿತಿಗೆ ಕಳುಹಿಸಬೇಕೆಂಬ ಬೇಡಿಕೆಯನ್ನು ಪರಿಗಣಿಸದ್ದಕ್ಕೆ ಮಸೂದೆಗೆ ಸಂಬಂಧಿಸಿದ ದಾಖಲೆ ಪ್ರತಿಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ಮಸೂದೆಗಳಿಗೆ ಸಂಬಂಧಿತ ಚರ್ಚೆಯನ್ನು ಡೆಪ್ಯುಟಿ ಸ್ಪೀಕರ್ ಹರಿವಂಶ್ ಸೋಮವಾರಕ್ಕೆ ಮುಂದೂಡಿದನ್ನು ವಿರೋಧಿಸಿ, ತೀವ್ರ ಪ್ರತಿಭಟನೆ ನಡೆಸಿದರು. ಪಟ್ಟುಬಿಡದ ಕಾಂಗ್ರೆಸ್, ಡಿಎಂಕೆ, ಸಿಪಿಎಂ ಮತ್ತು ಟಿಎಂಸಿ ಸದಸ್ಯರು ಮಸೂದೆಗಳನ್ನು ಹೆಚ್ಚಿನ ಪರಿಶೀಲನೆಗಾಗಿ ರಾಜ್ಯಸಭೆಯ ಸದನ ಸಮಿತಿಗೆ ಕಳುಹಿಸುವಂತೆ ಆಗ್ರಹಿಸಿದರು.
ಇದನ್ನು ಪರಿಗಣಿಸದ ಡೆಪ್ಯುಟಿ ಸ್ಪೀಕರ್ ಮಸೂದೆಗಳು ಧ್ವನಿ ಮತದ ಮೂಲಕ ಅಂಗೀಕಾರವಾಗಿವೆ ಎಂದು ಘೋಷಿಸಿದರು. ಮಸೂದೆ ಅಂಗೀಕಾರವಾದ ಬಗ್ಗೆ ಘೋಷಣೆ ಮಾಡುತ್ತಿದ್ದಂತೆ ಟಿಎಂಸಿ ಸಂಸದ ಡೆರೆಕ್ ಒ'ಬ್ರಿಯೆನ್ ಮತ್ತು ಇತರ ಸದಸ್ಯರು, ಸ್ಪೀಕರ್ ಪೀಠದ ಬಳಿ ಹತ್ತಿ ದಾಖಲೆಗಳನ್ನು ಹರಿದು ಹಾಕಿ ಘೋಷಣೆಗಳನ್ನು ಕೂಗಿದರು. ಮಾರ್ಷಲ್ಗಳು ಡೆಪ್ಯುಟಿ ಸ್ಪೀಕರ್ ಅವರಿಗೆ ರಕ್ಷಣೆ ಒದಗಿಸಿದರು.