ನವದೆಹಲಿ: ಲೋಕಸಭೆಯಲ್ಲಿ ಎರಡು ವಿವಾದಾತ್ಮಕ ಕೃಷಿ ಸುಧಾರಣಾ ಮಸೂದೆ ಅಂಗೀಕರಿಸಿದ್ದು, ಕಾಂಗ್ರೆಸ್ ಈ ವಿಷಯದ ಬಗ್ಗೆ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಇದು ಹಸಿರು ಕ್ರಾಂತಿಯನ್ನು ಸೋಲಿಸುವ ಪಿತೂರಿ ಎಂದು ಹೇಳಿದೆ.
ಸರ್ಕಾರವನ್ನು ಟೀಕಿಸಿರುವ ಕಾಂಗ್ರೆಸ್ ಮುಖಂಡ ಗೌರವ್ ಗೊಗೊಯ್, "ತಮ್ಮ ಬಂಡವಾಳಶಾಹಿ ಗೆಳೆಯರಿಗೆ ಅನುಕೂಲವಾಗುವಂತೆ ರೈತರ ಭೂಮಿಯನ್ನು ಹೇಗೆ ತೆಗೆದುಕೊಳ್ಳಬಹುದು ಎಂಬ ಬಗ್ಗೆ ಈ ಸರ್ಕಾರ ನೋಡುತ್ತಿದೆ. ಭೂ ಸ್ವಾಧೀನ ಕಾಯ್ದೆ ಇರಲಿ, ಕೈಗಾರಿಕಾ ವ್ಯವಸ್ಥೆಯಲ್ಲಿ ಕಾರ್ಮಿಕ ನ್ಯಾಯಾಲಯಗಳನ್ನು ದುರ್ಬಲಗೊಳಿಸುವುದು ಮತ್ತು ಈಗ ಕೃಷಿಯ ಮೇಲಿನ ಎರಡು ಮಸೂದೆಗಳ ಮೂಲಕ ಭಾರತೀಯ ಕೃಷಿ ವ್ಯವಸ್ಥೆಯ ಮೇಲೆ ಮೂರು ಮುಖದ ದಾಳಿ ನಡೆದಿದೆ. ಒಂದು ಎಪಿಎಂಸಿಗೆ ಸಂಬಂಧಿಸಿದೆ, ಇನ್ನೊಂದು ಗುತ್ತಿಗೆ ಕೃಷಿಗೆ ಸಂಬಂಧಿಸಿದೆ ಮತ್ತು ಮೂರನೇಯದು ಅಗತ್ಯ ಸರಕುಗಳ ಮೇಲಿನ ಮಸೂದೆ ಎಂದಿದ್ದಾರೆ.
ಇದು ರೈತರಿಗೆ ವರದಾನವಾಗಿದೆ ಎಂದು ಸರ್ಕಾರ ಹೇಳುತ್ತದೆ. ಭಾರತದ ರೈತರು ಮಸೂದೆಯನ್ನು ಅರ್ಥ ಮಾಡಿಕೊಳ್ಳದಿರುವಷ್ಟು ಮೂರ್ಖರಾಗಿದ್ದಾರೆಯೇ? ಈ ಮಸೂದೆ ಭಾರತೀಯ ರೈತರಿಗೆ ಪ್ರಯೋಜನಕಾರಿಯಾಗಿದ್ದರೆ ರೈತರು ಏಕೆ ಬೀದಿಗಿಳಿದಿದ್ದಾರೆ? ಹರಿಯಾಣದ ರೈತರನ್ನು ಪೊಲೀಸರು ಏಕೆ ಹೊಡೆಯುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ಸರ್ಕಾರವನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಮಾತನಾಡಿ, ಮೋದಿ ಸರ್ಕಾರವು ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಹೋಲುತ್ತದೆ. ಏಕೆಂದರೆ ಇದು ರೈತರ ಜೀವನ ಮತ್ತು ಜೀವನೋಪಾಯದ ಮೇಲೆ ಆಕ್ರಮಣ ಮಾಡುತ್ತಿದೆ ಎಂದಿದ್ದಾರೆ.
"ಕೃಷಿಯ ಕುರಿತಾದ ಕಠಿಣ ಕಾನೂನುಗಳು ಭಾರತದ ಕೃಷಿಯ ಭವಿಷ್ಯಕ್ಕೆ ಮರಣ ಶಾಸನವಾಗಲಿವೆ". ಭಾರತದಾದ್ಯಂತ 62 ಕೋಟಿ ರೈತರು ಮತ್ತು ಕೃಷಿ ಕಾರ್ಮಿಕರು ಆಂದೋಲನ ನಡೆಸುತ್ತಿದ್ದಾರೆ ಮತ್ತು 250ಕ್ಕೂ ಹೆಚ್ಚು ರೈತ ಸಂಘಟನೆಗಳು ಪ್ರತಿಭಟನೆಯಲ್ಲಿ ಕುಳಿತಿವೆ. ಉಪವಾಸ ಸತ್ಯಾಗ್ರಹ ಮತ್ತು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿವೆ ಎಂದು ಸುರ್ಜೆವಾಲಾ ಹೇಳಿದ್ದಾರೆ.