ನವದೆಹಲಿ: ಮಾಜಿ ಹಣಕಾಸು ಸಚಿವ ದಿ. ಅರುಣ್ ಜೇಟ್ಲಿ ಅವರ ಪತ್ನಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದು, 'ಅರುಣ್ ಜೇಟ್ಲಿ ನಿವೃತ್ತಿಯ ನಂತರದ ಪಿಂಚಣಿ ಹಣವನ್ನು ರಾಜ್ಯ ಸಭೆಯಲ್ಲಿ ಹಣದ ಅವಶ್ಯಕತೆ ಇರುವ ಬಡ ಸಿಬ್ಬಂದಿಗೆ ನೀಡುವಂತೆ' ಕೋರಿದ್ದಾರೆ.
ಹೌದು, ಜೇಟ್ಲಿ ನಿಧನದ ನಂತ್ರ ಕುಟುಂಬಸ್ಥರು ಪಡೆಯಬೇಕಿದ್ದ ಪಿಂಚಣಿ ಹಣವನ್ನು ಸ್ವೀಕರಿಸದೆ, ರಾಜ್ಯಸಭೆಯ ಬಡ ಸಿಬ್ಬಂದಿಗೆ ನೀಡಲು ಮುಂದಾಗಿದ್ದಾರೆ. ರಾಜ್ಯ ಸಭೆಯಲ್ಲಿ ಜೇಟ್ಲಿ ಅವರು ಎರಡು ದಶಕಗಳ ಕಾಲ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ರಾಜ್ಯಸಭೆಯ ಕ್ಲಾಸ್- IVನೇ ವಿಭಾಗದ ಬಡ ನೌಕರರಿಗೆ ಈ ಹಣವನ್ನು ನೀಡಬೇಕು. ಅರುಣ್ ಜೇಟ್ಲಿ ಕೂಡ ಇದನ್ನೇ ಬಯಸಿದ್ದಿರಬಹುದು ಎಂದು ಪತ್ನಿ ಸಂಗೀತಾ ಜೇಟ್ಲಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿ (66) ಆಗಸ್ಟ್ 24ರಂದು ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆದಿದ್ದರು. ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿ, ಹಣಕಾಸು ಸಚಿವರಾಗಿ, ಕೇಂದ್ರ ಸಚಿವಾಲಯಗಳ ವಿವಿಧ ಸಮಿತಿಗಳ ಮುಖಂಡರಾಗಿ ಕಾರ್ಯನಿರ್ವಹಿಸಿದ್ದರು.
'ಅರುಣ್ ಯಾವಾಗಲೂ ಎಲೆಮರೆಯ ಕಾಯಿಯಂತೆ ಲೋಕೋಪಕಾರಿ ಆಗಿದ್ದರು. ವಕೀಲ ವೃತ್ತಿಯಲ್ಲಾಗಲಿ ಅಥವಾ ರಾಜಕೀಯದಲ್ಲೇ ಆಗಲಿ ಯಶಸ್ಸು ಸಾಧಿಸಲು ಇಂತಹ ಗುಣಗಳಿಂದಲೇ ಸಾಧ್ಯವಾಯಿತು ಎಂಬುದನ್ನು ಅವರು ಬಲವಾಗಿ ನಂಬಿದ್ದರು. ಅವರ ಬೆಂಬಲಿಗರಿಗೆ, ಮಾರ್ಗದರ್ಶಕರಿಗೆ, ಸಹೋದ್ಯೋಗಳಿಗೆ, ಸ್ನೇಹಿತರಿಗೆ, ಸಂಬಂಧಿಕರಿಗೆ, ಅಗತ್ಯವಿರುವ ಯಾರಿಗಾದರೂ ಸಹಾಯ ಮಾಡಲು ಮುಂದೆ ಬರುತ್ತಿದ್ದರು' ಎಂದು ಸಂಗೀತಾ ಜೇಟ್ಲಿ ಪತ್ರದಲ್ಲಿ ತಿಳಿಸಿದ್ದಾರೆ.