ಮುಂಬೈ: ಕೌಟುಂಬಿಕ ಕಲಹದ ಕಾರಣಕ್ಕೆ ನಿವೃತ್ತ ಪೊಲೀಸ್ ಪೇದೆಯೋರ್ವ ತನ್ನ ಮಗನನ್ನೇ ಕೊಲೆ ಮಾಡಿರುವ ಆರೋಪ ಪ್ರಕರಣ ಮುಂಬೈ ಹೊರವಲಯದ ಪೊವೈ ಪ್ರದೇಶದ ಗಣೇಶ ನಗರದಲ್ಲಿ ನಡೆದಿದೆ.
ಸೋಮವಾರ ಮನೆಯಲ್ಲಿ ಮಗನೊಂದಿಗೆ ಆರಂಭವಾಗಿದ್ದ ಜಗಳ ತಾರಕಕ್ಕೇರಿದಾಗ 61 ವರ್ಷ ವಯಸ್ಸಿನ ಆರೋಪಿ ಗುಲಾಬ್ ಗಲಂದೆ, ತನ್ನ 40 ವರ್ಷದ ಮಗ ಹರೀಶ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೊಲೆಯಾದ ಮಗ ಅಂಧೇರಿಯ ಸರ್ಕಾರಿ ರೈಲ್ವೆ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಆಗಿದ್ದ ಹಾಗೂ ಕೊಲೆ ಆರೋಪಿಯು 15 ವರ್ಷಗಳ ಕಾಲ ಮುಂಬೈ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತನಾಗಿ ಸದ್ಯ ಕಟ್ಟಡ ನಿರ್ಮಾಣ ಸಂಸ್ಥೆಯೊಂದರ ಸೆಕ್ಯೂರಿಟಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ.
ಆರೋಪಿ ಗುಲಾಬ್ ಗಲಂದೆಯ ಪುತ್ರ ಹರೀಶ್ ಮದ್ಯ ವ್ಯಸನಿಯಾಗಿ ಹೆಂಡತಿ ಹಾಗೂ ಎರಡು ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಿರಲಿಲ್ಲ. ಇದೇ ಕಾರಣಕ್ಕೆ ತಂದೆ-ಮಗನ ಮಧ್ಯೆ ಆಗಾಗ್ಗೆ ಜಗಳವಾಗುತ್ತಿತ್ತು. ಕೊಲೆ ನಡೆದ ದಿನದಂದು ಹರೀಶ್ ಕುಡಿದು ಮನೆಗೆ ಬಂದಿದ್ದರಿಂದ ತಂದೆ ಹಾಗೂ ಆತನ ಮಧ್ಯೆ ಜೋರು ಜಗಳ ನಡೆದಿತ್ತು. ಜಗಳ ಮಿತಿ ಮೀರಿದಾಗ ತಂದೆ ಗುಲಾಬ್ ಮಚ್ಚಿನಿಂದ ಹರೀಶ್ ಮೇಲೆ ಹಲ್ಲೆ ಮಾಡಿದ್ದಾನೆ. ತೀವ್ರ ಗಾಯಗೊಂಡ ಹರೀಶ್ನನ್ನು ಆಸ್ಪತ್ರೆಗೆ ಸೇರಿಸುವ ಮುನ್ನವೇ ಆತ ಪ್ರಾಣಬಿಟ್ಟಿದ್ದ.
ಆರೋಪಿ ಗುಲಾಬ್ ಗಲಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 302ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.