ನವದೆಹಲಿ: ನಗರದ ಹಲವು ಭಾಗಗಳಲ್ಲಿ ನಿನ್ನೆ ಸಂಜೆ ಹಬ್ಬಿದ ಹಿಂಸಾಚಾರದ ವದಂತಿಯಿಂದಾಗಿ ಇಲ್ಲಿನ ನಿವಾಸಿಗಳು ಭೀತಿಗೊಳಗಾದರು.
ದೆಹಲಿ ಪೊಲೀಸರು ಮತ್ತು ಎಎಪಿ ಮುಖಂಡರು, ಹಿಂಸಾಚಾರದಂತಹ ಯಾವುದೇ ಘಟನೆ ನಡೆದಿಲ್ಲವೆಂದು ಶಾಂತವಾಗಿರಲು ಮನವಿ ಮಾಡಿದರೂ ಸಹ, ಜನರಿಂದ ಆತಂಕ ದೂರವಾಗಿಲ್ಲ.
ದೆಹಲಿಯ ಪಶ್ಚಿಮ ಜಿಲ್ಲೆಯ ಖಯಾಲಾ-ರಘುಬೀರ್ ನಗರ ಪ್ರದೇಶದಲ್ಲಿ ಸ್ವಲ್ಪ ಉದ್ವಿಗ್ನತೆ ಇದೆ ಎಂಬ ವದಂತಿ ಹರಿದಾಡಿದೆ. ಇದರ ಹಿಂದೆ ಯಾವುದೇ ಸತ್ಯವಿಲ್ಲ. ಪರಿಸ್ಥಿತಿ ಸಂಪೂರ್ಣವಾಗಿ ಶಾಂತಿಯುತವಾಗಿರುವುದರಿಂದ ಎಲ್ಲರೂ ನಿರಾಳವಾಗಿರುವಂತೆ ವಿನಂತಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಪೊಲೀಸ್ ಉಪ ಆಯುಕ್ತ (ಡಿಸಿಪಿ) ದೀಪಕ್ ಪುರೋಹಿತ್ ತಿಳಿಸಿದ್ದಾರೆ.
ತಿಲಕ್ ನಗರ ಮತ್ತು ಖ್ಯಾಲಾ ಪ್ರದೇಶಗಳಲ್ಲಿ ಕೋಮು ಉದ್ವಿಗ್ನತೆಗೆ ಸಂಬಂಧಿಸಿದಂತೆ ಕೆಲವು ವದಂತಿಗಳಿವೆ. ಇಲ್ಲಿ ಮತ್ತು ಇಡೀ ಪಶ್ಚಿಮ ಜಿಲ್ಲಾ ಪ್ರದೇಶದಲ್ಲಿ ಯಾವುದೇ ಉದ್ವಿಗ್ನತೆ ಇಲ್ಲ. ಹೀಗಾಗಿ ಚಿಂತಿಸುವ ಅವಶ್ಯಕತೆ ಇಲ್ಲವೆಂದು ಅವರು ಧೈರ್ಯ ತುಂಬಿದ್ದಾರೆ.
ವದಂತಿಯಿಂದಾಗಿ ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ಏಳು ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ಗೇಟ್‌ಗಳನ್ನು ಯಾವುದೇ ಕಾರಣವನ್ನು ನೀಡದೆ ಸ್ಥಗಿತಗೊಳಿಸಿತ್ತು. ಬಳಿಕ ಮೆಟ್ರೋ ನಿಲ್ದಾಣಗಳನ್ನು ಮತ್ತೆ ತೆರೆಯಲಾಗಿತ್ತು.