ಕೊರೊನಾದಿಂದಾಗಿ ಜನರು ಮಾಸ್ಕ್ಗಳನ್ನು ಜೀವನದ ಅತ್ಯವಶ್ಯಕ ವಸ್ತುವನ್ನಾಗಿ ಬಳಸುತ್ತಿದ್ದಾರೆ. ಲಸಿಕೆ ಬರುವವರೆಗೂ ಕೋವಿಡ್ನಿಂದ ಪಾರಾಗಲು ಮಾಸ್ಕ್ನೊಂದಿಗೆ ಜೀವನ ಸಾಗಿಸಲೇಬೇಕಾದ ಅನಿವಾರ್ಯತೆ. ಆದರೆ, ಈ ಮಾಸ್ಕ್ ಬಳಕೆಯಿಂದ ಜನರ ಮುಖವನ್ನು ಪತ್ತೆ ಮಾಡುವುದು ಕಷ್ಟವಾಗಿದೆ. ಇದನ್ನೇ ಅವಕಾಶವನ್ನಾಗಿ ಬಳಸಿಕೊಂಡಿರುವ ಕೇರಳದ ಫೋಟೋಗ್ರಾಫರ್ ಒಬ್ಬರು ವಿನೂತನವಾಗಿ ಮಾಸ್ಕ್ ತಯಾರಿಸಿದ್ದಾರೆ.
ಕೇರಳದ ಕೊಟ್ಟಾಯಂನ ಬಿನೇಶ್ ಜಿ. ಪಾಲ್ ಎಂಬ ಫೋಟೋಗ್ರಾಫರ್ ರೂಪಿಸಿರುವ ಈ ಮಾಸ್ಕ್ ಅನ್ನು ಬಳಸಿದರೆ ವ್ಯಕ್ತಿಯನ್ನು ಸುಲಭವಾಗಿ ಗುರುತಿಸಬಹುದು. ಮಾಸ್ಕ್ ಬಳಸುವ ವ್ಯಕ್ತಿಯ ಚಿತ್ರವನ್ನು ಮುಖಗವಸಿನ ಮೇಲೆ ಮುದ್ರಿಸಿ ವಿನೂತನವಾಗಿ ತಯಾರಿಸಿದ್ದಾರೆ.
20 ನಿಮಿಷದಲ್ಲಿ ಮಾಸ್ಕ್ ರೆಡಿ:
20 ನಿಮಿಷದಲ್ಲಿ ಮುಖವಾಡದ ತಯಾರಿ ಕುರಿತು ವಿವರಿಸಿದ ಅವರು, ಯಾರಿಗೆ ಮುಖಗವಸು ಬೇಕೋ ಅವರ ಫೊಟೊವನ್ನು ಹೈ ರೆಸಲ್ಯೂಶನ್ ಕ್ಯಾಮೆರದಲ್ಲಿ ತೆಗೆದು ಬಳಿಕ ಅದನ್ನು ಪ್ರತ್ಯೇಕ ಹಾಳೆಯ ಮೇಲೆ ಮುದ್ರಿಸಿ, ಆನಂತರ ಮಾಸ್ಕ್ ಮೇಲೆ ಸೂಪರ್ ಇಂಪೋಸ್ ವಿಧಾನದಲ್ಲಿ ಅಂಟಿಸಬೇಕು. ಈ ವೇಳೆ ಗಲ್ಲದ ಅಳತೆಯನ್ನು ಸರಿಪಡಿಸಿಕೊಳ್ಳುತ್ತೇವೆ. ಈ ಪ್ರಕ್ರಿಯೆಗೆ 20 ನಿಮಿಷ ತೆಗೆದುಕೊಳ್ಳುತ್ತೆವೆ ಎಂದು ವಿವರಿಸಿದರು.ಪೂ
2ದಿನಗಳಲ್ಲಿ 1000 ಮಾಸ್ಕ್ಗಳ ತಯಾರಿ :
ಎರಡು ದಿನಗಳಲ್ಲಿ 1000 ಮಾಸ್ಕ್ಗಳನ್ನು ತಯಾರಿ ಮಾಡಲಾಗಿದೆ. ಇನ್ನೂ 5000 ಮಾಸ್ಕ್ಗಳ ತಯಾರಿಗೆ ಆರ್ಡರ್ ಬಂದಿದೆ. ಸುತ್ತಮುತ್ತ ಯಾರು ಈ ರೀತಿಯಾದ ಮಾಸ್ಕ್ ತಯಾರಿ ಮಾಡುತ್ತಿಲ್ಲ. ಇನ್ನೂ ಹೆಚ್ಚಿನ ಆರ್ಡರ್ ಬಂದರೂ ಮಾಸ್ಕ್ ಗುಣಮಟ್ಟ, ಪೂರೈಕೆಯಲ್ಲಿ ನಾವು ರಾಜಿಯಾಗುವುದಿಲ್ಲಎಂದರು.