ನಾಗ್ಪುರ: ಮಹಾರಾಷ್ಟ್ರದ ಬುಲ್ಢಾಣಾದ ಲೋನಾರ್ ಕೆರೆ ನೀರು ಗುಲಾಬಿ ಬಣ್ಣಕ್ಕೆ ತಿರುಗುತ್ತಿರೋದು ಜನರಲ್ಲಿ ಅಚ್ಚರಿ ಮೂಡಿಸಿದೆ. ನೀರು ಗುಲಾಬಿಯಾಗಲು ಖಚಿತ ಕಾರಣವೇನೆಂಬುದು ಈವರೆಗೂ ತಿಳಿದಿಲ್ಲ. ಕೆರೆ ನೀರು ಗುಲಾಬಿಯಾಗುತ್ತಿರುವುದರ ಹಿಂದಿನ ಕಾರಣ ಅರಿಯಲು ಮುಂದಾಗಿರುವ ನಾಗ್ಪುರದ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು, ಮುಂದಿನ ವಾರ ಕೆರೆಗೆ ಭೇಟಿ ನೀಡಲಿದ್ದು, ನೀರಿನ ಸ್ಯಾಂಪಲ್ ಸಂಗ್ರಹಿಸಲಿದ್ದಾರೆ.
ಮೊಟ್ಟೆಯಾಕಾರದಲ್ಲಿರುವ ಲೋನಾರ್ ಕೆರೆಯು 50 ಸಾವಿರ ವರ್ಷಗಳ ಹಿಂದೆ ಆಕಾಶಕಾಯವೊಂದು ಭೂಮಿಗೆ ಅಪ್ಪಳಿಸಿದಾಗ ಸೃಷ್ಟಿಯಾಗಿತ್ತು ಎಂದು ಹೇಳಲಾಗಿದೆ. ಮಹಾರಾಷ್ಟ್ರದ ಅತ್ಯಂತ ಜನಪ್ರಿಯ ಪ್ರವಾಸೋದ್ಯಮ ತಾಣವಾಗಿರುವ ಇಲ್ಲಿಗೆ ಸಾಕಷ್ಟು ವಿಜ್ಞಾನಿಗಳು ಸಹ ಆಗಾಗ ಭೇಟಿ ನೀಡುತ್ತಾರೆ. ಕೆರೆ ಸುಮಾರು 1.2 ಕಿ.ಮೀನಷ್ಟು ವ್ಯಾಸ ಹೊಂದಿದೆ.
ಇತ್ತೀಚಿನ ಕೆಲ ದಿನಗಳಲ್ಲಿ ಈ ಕೆರೆಯ ನೀರು ಗುಲಾಬಿ ವರ್ಣಕ್ಕೆ ತಿರುಗುತ್ತಿರುವುದು ಸ್ಥಳೀಯರಲ್ಲಿ ಮಾತ್ರವಲ್ಲದೆ ವಿಜ್ಞಾನಿಗಳಲ್ಲೂ ಕುತೂಹಲ ಮೂಡಿಸಿದೆ. ಲವಣಾಂಶ ಹೆಚ್ಚಳ ಹಾಗೂ ಪಾಚಿಯ ಒತ್ತಡದಿಂದ ನೀರು ಗುಲಾಬಿಯಾಗುತ್ತಿದೆ ಎಂದು ಕೆಲವರು ಹೇಳುತ್ತಾರೆ. ಇದೇ ಮೊದಲೇನಲ್ಲ. ಈ ಹಿಂದೆಯೂ ಅನೇಕ ಬಾರಿ ಹೀಗಾಗಿದೆ. ಆದರೆ, ಈ ಸಲ ಗುಲಾಬಿ ವರ್ಣ ಹೆಚ್ಚಾಗಿರುವುದರಿಂದ ಎಲ್ಲರ ಗಮನ ಸೆಳೆದಿದೆ ಎಂದು ಹಲವಾರು ವರ್ಷಗಳಿಂದ ಕೆರೆಯ ಬಗ್ಗೆ ಬಲ್ಲವರು ಮಾಹಿತಿ ನೀಡಿದ್ದಾರೆ.
'ಲೋನಾರ್ ಕೆರೆಯನ್ನು ವನ್ಯಧಾಮವಾಗಿ ಘೋಷಿಸಿರುವುದರಿಂದ ಇದು ಅರಣ್ಯ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ. ಈಗಾಗಲೇ ನಾವು ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಗೆ ನೀರಿನ ಸ್ಯಾಂಪಲ್ ಕಳುಹಿಸಿದ್ದೇವೆ. ಆದರೂ ಅಲ್ಲಿನ ವಿಜ್ಞಾನಿಗಳು ಜೂನ್ 15 ರಂದು ಖುದ್ದಾಗಿ ಆಗಮಿಸಿ ಪರಿಶೀಲಿಸಲಿದ್ದಾರೆ. ಅವರ ಪರಿಶೀಲನೆಯ ನಂತರವೇ ನೀರು ಗುಲಾಬಿ ವರ್ಣಕ್ಕೆ ತಿರುಗುತ್ತಿರುವುದೇಕೆ ಎಂಬುದು ತಿಳಿಯಬೇಕಿದೆ.' ಎಂದು ಬುಲ್ಢಾಣಾ ಕಲೆಕ್ಟರ್ ಸುಮನ್ ಚಂದ್ರ ಹೇಳಿದರು.
ಲೋನಾರ್ ಕೆರೆ ಇರುವ ಕುಳಿಯು ವಿಶ್ವದ ಪ್ರಮುಖ ಭೌಗೋಳಿಕ ತಾಣಗಳಲ್ಲೊಂದಾಗಿದೆ ಎಂದು 1823ರಲ್ಲಿ ಆಗಿನ ಬ್ರಿಟಿಷ್ ಅಧಿಕಾರಿ ಸಿಜೆಇ ಅಲೆಕ್ಸಾಂಡರ್ ಎಂಬುವರು ಹೇಳಿದ್ದರು.