ನವದೆಹಲಿ : ಇಸ್ರೋ ಅಧ್ಯಕ್ಷ ಡಾ.ಕೆ ಶಿವನ್ ಈಟಿವಿ ಭಾರತದ ಜೊತೆ ದಶಕದ ಇಸ್ರೋ ಯೋಜನೆಯ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಬಾಹ್ಯಾಕಾಶ ಸಂಶೋಧನೆ ಮತ್ತು ತಂತ್ರಜ್ಞಾನದಲ್ಲಿ ಖಾಸಗಿ ಸಹಭಾಗಿತ್ವವನ್ನು ಆಕರ್ಷಿಸುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ 2019ರಲ್ಲಿ ಬಾಹ್ಯಾಕಾಶ ಸುಧಾರಣೆ ಪರಿಚಯಿಸುತ್ತಿದ್ದಂತೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹೊಸ ಚೈತನ್ಯ ಮತ್ತು ಧ್ಯೇಯದೊಂದಿಗೆ ದಶಕವನ್ನು ಪ್ರವೇಶಿಸಿದೆ.
ದೇಶೀಕರಣ ಮತ್ತು ಸ್ವಾವಲಂಬನೆ ಮುಂಬರುವ ಯೋಜನೆಗಳ ಪ್ರಮುಖ ನಾಡಿಮಿಡಿತ. ಮುಖ್ಯವಾಗಿ ಕೇಂದ್ರ ಸರ್ಕಾರವು ಮಂಡಿಸಿದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಆದ್ಯತೆ ನೀಡಲಾಗುವುದು.
ಇದು ಕಠಿಣ ಕಾರ್ಯವಾಗಿದ್ದರೂ, ಇದು ಭಾರತ ಹೊಸತನಕ್ಕೆ ತೆರೆದುಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದ ಅವರು, ಗಗನಯಾನ್ ಮತ್ತು ಚಂದ್ರಯಾನ್ -3 ಸೇರಿದಂತೆ ಚಾಲ್ತಿಯಲ್ಲಿರುವ ಯೋಜನೆಗಳ ಕಡೆ ಕೇಂದ್ರೀಕರಿಸಲಾಗುವುದು ಎಂದು ತಿಳಿಸಿದರು.
ಸಂದರ್ಶನದ ವಿಡಿಯೋ ನೋಡಿ: ಗಗನಯಾನ, ಚಂದ್ರಯಾನ-3 ಮಿಷನ್ ಬಗ್ಗೆ ಇಸ್ರೋ ಅಧ್ಯಕ್ಷರಿಂದ ಮಹತ್ವದ ಮಾಹಿತಿ
ನಾವು ಕ್ವಾಂಟಮ್ ಸಂವಹನ ಉಪಗ್ರಹ, ಹೈಪರ್ಸೋನಿಕ್ ಪ್ರೊಪಲ್ಷನ್ ಬಗ್ಗೆಯೂ ಯೋಚಿಸುತ್ತಿದ್ದೇವೆ. ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊದಲ ಮಿಷನ್ ಆದಿತ್ಯ-ಎಲ್ 1ಗೆ ಆದ್ಯತೆ ನೀಡಲಾಗುವುದು. ಹಾಗೆಯೇ ಶುಕ್ರ ಗ್ರಹಕ್ಕೆ ಬಾಹ್ಯಾಕಾಶ ನೌಕೆ ಕಳುಹಿಸುವ ಯೋಜನೆ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂದರು.
ಬಾಹ್ಯಾಕಾಶ ಸುಧಾರಣೆಯ ಸುದ್ದಿಗಳಿಂದ ನನಗೆ ನಿಜಕ್ಕೂ ಆಶ್ಚರ್ಯವಾಗುತ್ತಿದೆ. ನಾನು ಅದನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ. ಈ ಸುಧಾರಣೆಯು ದೇಶದ ಸುಪ್ತ ಸಾಮರ್ಥ್ಯವನ್ನು ಬಹಿರಂಗಪಡಿಸುತ್ತದೆ. ದೇಶದಲ್ಲಿ ಇದೇ ತರಹದ ಹಲವಾರು ಇಸ್ರೋಗಳು ಹೆಚ್ಚಾಗಲಿವೆ ಎಂದು ನಾನು ನಿರೀಕ್ಷಿಸುತ್ತಿದ್ದೇನೆ ಎಂದು ಡಾ.ಶಿವನ್ ಸಂತಸ ವ್ಯಕ್ತಪಡಿಸಿದರು.
ಅಮೆಜಾನ್ ವೆಬ್ ಸರ್ವೀಸಸ್ (ಎಡಬ್ಲ್ಯೂಎಸ್) ಮತ್ತು ಭಾರತಿ ಏರ್‌ಟೆಲ್‌ನ ಒನ್ ವೆಬ್‌ನಂತಹ ಹಲವಾರು ಖಾಸಗಿ ಉದ್ಯಮಗಳು ಇಸ್ರೋದ ಬಾಹ್ಯಾಕಾಶ ಯೋಜನೆಗಳಲ್ಲಿ ಆಸಕ್ತಿ ವ್ಯಕ್ತಪಡಿಸಿವೆ ಎಂದ ಅವರು, ದೇಶದ ಯುವಕರ ಬಗ್ಗೆ ಮಾತನಾಡಿ, ಯುವ ಮನಸ್ಸುಗಳ ನವೀನ ಹಾಗೂ ಮಹತ್ವದ ಆಲೋಚನೆಗಳೊಂದಿಗೆ ಹೊರ ಬರುತ್ತಿದ್ದಾರೆ.
ದೇಶದ ಯುವ ಪೀಳಿಗೆ ಭಾರತವನ್ನು ತಾಂತ್ರಿಕ ಶಕ್ತಿಶಾಲಿಯನ್ನಾಗಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ನನ್ನ ನಿರೀಕ್ಷೆಯಲ್ಲಿ, ಭಾರತವು ಒದಗಿಸುವ ತಾಂತ್ರಿಕ ಆವಿಷ್ಕಾರಗಳಿಂದ ಇಡೀ ಪ್ರಪಂಚವನ್ನು ಆಕರ್ಷಿಸಲಾಗುವುದು ಎಂದರು.