ನವದೆಹಲಿ: ದೆಹಲಿಯಲ್ಲಿ ನಡೆದ ಸಿಎಎ ವಿರೋಧಿ ಗಲಭೆ ಪ್ರಕರಣದಲ್ಲಿ ಜೆಎನ್ಯುನ ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ನನ್ನು ಬಂಧಿಸಲಾಗಿದೆ. ಕಾನೂನು ಬಾಹಿರ ಚಟುವಟಿಕೆ (ತಡೆ) ಕಾಯ್ದೆಯಡಿ ಖಾಲಿದ್ನನ್ನು ಅರೆಸ್ಟ್ ಮಾಡಲಾಗಿದೆ.
ಸುಮಾರು 11 ಗಂಟೆ ವಿಚಾರಣೆಗೊಳಪಡಿಸಿದ ಬಳಿಕ ಖಾಲಿದ್ನನ್ನು ದೆಹಲಿ ಪೊಲೀಸರ ವಿಶೇಷ ತಂಡ ಅರೆಸ್ಟ್ ಮಾಡಿದೆ. ಈತನನ್ನು ಇಂದು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು.
ಈಶಾನ್ಯ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಅಪರಾಧ ನಿಗ್ರಹ ದಳದ ಪೊಲೀಸರು ಖಾಲಿದ್ನನ್ನು ಸೆಪ್ಟೆಂಬರ್ 2ರಂದೇ ಒಂದೆರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಇದಕ್ಕೂ ಮುನ್ನ ದೆಹಲಿ ಪೊಲೀಸರ ವಿಶೇಷ ತಂಡ ಕೂಡ ಈತನನ್ನು ವಿಚಾರಣೆಗೆ ಒಳಪಡಿಸಿತ್ತು. ದೆಹಲಿ ಗಲಭೆಗೆ ಖಾಲಿದ್ ಸಂಚು ರೂಪಿಸಿದ್ದ ಎಂಬ ಆರೋಪದ ಹಿನ್ನೆಲೆಯಲ್ಲಿ ಖಾಲಿದ್ನನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಲಾಗಿತ್ತು. ಖಾಲಿದ್ನ ಮೊಬೈಲ್ ಫೋನ್ ಅನ್ನು ಕೂಡಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ದೆಹಲಿ ಪೊಲೀಸರು ಸಲ್ಲಿಸಿದ್ದ ಹೆಚ್ಚುವರಿ ಚಾರ್ಜ್ ಶೀಟ್ನಲ್ಲಿ ಉಮರ್ ಖಾಲೀದ್, ಸಿಪಿಐ(ಎಂ) ನಾಯಕ ಸೀತಾರಾಮ್ ಯೆಚೂರಿ, ಸ್ವರಾಜ್ ಅಭಿಯಾನ್ ನಾಯಕ ಯೋಗೇಂದ್ರ ಯಾದವ್, ಅರ್ಥಶಾಸ್ತ್ರಜ್ಞರಾದ ಜಯತಿ ಘೋಷ್, ದೆಹಲಿ ವಿವಿ ಪ್ರಾಧ್ಯಾಪಕ, ಕಾರ್ಯಕರ್ತ ಅಪೂರ್ವಾನಂದ ಹಾಗೂ ಡಾಕ್ಯುಮೆಂಟರಿ ಫಿಲ್ಮ್ ಮೇಕರ್ ರಾಹುಲ್ ರಾಯ್ ಅವರನ್ನು ಸಹ ಪಿತೂರಿದಾರರು ಎಂದು ಆರೋಪಿಸಲಾಗಿತ್ತು.
ಈಶಾನ್ಯ ದೆಹಲಿಯಲ್ಲಿ ಫೆಬ್ರವರಿ 24ರಂದು ಸಿಎಎ ಪರ ಮತ್ತು ವಿರೋಧಿ ಪ್ರತಿಭಟನೆ ಹಿಂಸಾರೂಪ ಪಡೆದಿತ್ತು. ಹಿಂಸಾಚಾರದಲ್ಲಿ 53 ಮಂದಿ ಸಾವನ್ನಪ್ಪಿ, ಸುಮಾರು 200 ಜನ ಗಾಯಗೊಂಡಿದ್ದರು. ಘಟನೆಯಲ್ಲಿ 108 ಪೊಲೀಸರಿಗೂ ಗಾಯಗಳಾಗಿದ್ದವು.
ಒಟ್ಟು 751 ಪ್ರಕರಣಗಳಲ್ಲಿ 1,575 ಮಂದಿಯನ್ನು ಪೊಲೀಸರು ಇದುವರೆಗೆ ಬಂಧಿಸಿದ್ದಾರೆ. 250ಕ್ಕೂ ಹೆಚ್ಚು ಚಾರ್ಜ್ಶೀಟ್ಗಳನ್ನು ಸಲ್ಲಿಸಲಾಗಿದೆ. ಇದರಲ್ಲಿ 1,153 ಆರೋಪಿಗಳ ಹೆಸರನ್ನು ಆರೋಪಪಟ್ಟಿಯಲ್ಲಿ ದಾಖಲಿಸಲಾಗಿದೆ.