ನವದೆಹಲಿ: ಒಂದು ಗಂಟೆಯ ಅವಧಿಯಲ್ಲಿ ಸುಮಾರು 17 ಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ ಎನ್ನುವ ಆತಂಕಕಾರಿ ವಿಚಾರ ಇದೀಗ ಬಹಿರಂಗವಾಗಿದೆ.
ಲೋಕಸಭೆಯಲ್ಲಿ ಬುಧವಾರ ಮೋಟಾರು ವಾಹನ ಕಾಯಿದೆ ತಿದ್ದುಪಡಿ ಕಾಯಿದೆಯನ್ನು ಮಂಡಿಸಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ರಸ್ತೆ ಅಪಘಾತದ ಬಗ್ಗೆ ದಾಖಲೆ ಬಹಿರಂಗಪಡಿಸಿದ್ದಾರೆ.
ಅಂಕಿ - ಅಂಶದ ಪ್ರಕಾರ 2017ರಲ್ಲಿ ಸುಮಾರು ಒಂದೂವರೆ ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇದರ ಅನ್ವಯ ಪ್ರತಿ ಗಂಟೆಗೆ 53 ರಸ್ತೆ ಅಪಘಾತ ಸಂಭವಿಸುತ್ತಿದ್ದು, 17 ಮಂದಿ ಮೃತಪಡುತ್ತಿದ್ದಾರೆ.
ಉತ್ತರ ಪ್ರದೇಶ ರಸ್ತೆ ಅಪಘಾತದಲ್ಲಿ ಅಗ್ರಸ್ಥಾನದಲ್ಲಿದ್ದು, 2017ರಲ್ಲಿ 20,124 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ತಮಿಳುನಾಡು(16,157) ರಾಜ್ಯ ಇದೆ. ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ ಇದೆ ಎನ್ನುವುದು ಆತಂಕಕಾರಿ ಸಂಗತಿ. ದಾಖಲೆ ಪ್ರಕಾರ 2017ರಲ್ಲಿ ಕರ್ನಾಟಕದಲ್ಲಿ 10,609 ಮಂದಿ ಮೃತಪಟ್ಟಿದ್ದಾರೆ.