ನವದೆಹಲಿ: ಈಶಾನ್ಯ ದೆಹಲಿಯ ಬ್ರಹ್ಮಪುರಿ ಪ್ರದೇಶದಲ್ಲಿ ತೃತೀಯ ಲಿಂಗಿಗಳ ಗುಂಪೊಂದು ಮಹಿಳೆಯ ಮೇಲೆ ಹಲ್ಲೆ ನಡೆಸಿದೆ.
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಜಗಳ ನಡೆದಿದ್ದು, ಘಟನೆಯಲ್ಲಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆ ಮಾಲೀಕ ಪ್ರವೀಣ್ ಶರ್ಮಾ ಅವರು ತಮ್ಮ ಕೊಠಡಿ ಖಾಲಿ ಮಾಡುವಂತೆ ಬಾಡಿಗೆದಾರರಿಗೆ ಹೇಳಿದ್ದರು. ಮನೆ ಖಾಲಿ ಮಾಡಲು ಬಾಡಿಗೆದಾರ ನಿರಾಕರಿಸಿದ್ದಕ್ಕೆ ಪ್ರವೀಣ್ ಶರ್ಮಾ ಅವರ ಮೊಮ್ಮಗ ಸಂಜಯ್ ಕೆಲ ತೃತೀಯ ಲಿಂಗಿಗಳನ್ನು ಮನೆಗೆ ಕರೆಯಿಸಿ ಅವರ ಮುಖಾಂತರ ಮನೆ ಖಾಲಿ ಮಾಡಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಮೇಲೂ ಅವರು ಹಲ್ಲೆ ಮಾಡಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ವೇದ ಪ್ರಕಾಶ್ ಸೂರ್ಯ ತಿಳಿಸಿದ್ದಾರೆ.
ಶರ್ಮಾ ಮನೆಯಲ್ಲಿದ್ದ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.