ಚೆನ್ನೈ( ತಮಿಳುನಾಡು): ಇಲ್ಲಿನ ಕೃಷಿಕ ದಂಪತಿ ಬಂಜರು ಭೂಮಿಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾರ್ಪಾಡು ಮಾಡಿ ಉತ್ತಮ ಆದಾಯ ಗಳಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಈರೋಡ್ ಜಿಲ್ಲೆಯ ಗೋಪಾಲ್ ಹಾಗೂ ಪೂಂಗೊಡಿ ದಂಪತಿ ಕೃಷಿಕ ದಂಪತಿ.
ಅನೇಕ ಬಗೆಯ ತರಕಾರಿಗಳು ಮತ್ತು ವಿವಿಧ ರೀತಿಯ ಸೊಪ್ಪುಗಳನ್ನು ಬೆಳೆದಿರುವ ಇವರು ರಾಸಾಯನಿಕ - ಕೀಟನಾಶಕಗಳನ್ನು ಬಳಸಲ್ಲ ಎಂಬುದು ವಿಶೇಷ. ಬದಲಾಗಿ ಶುಂಠಿ ಮತ್ತು ಬೆಳ್ಳುಳ್ಳಿ ಮಿಶ್ರಿತ ನೀರನ್ನು ಸಿಂಪಡಣೆ ಮಾಡುತ್ತಾರೆ. ಈ ಜಮೀನಿನಲ್ಲಿರುವ ತರಕಾರಿಗಳ ಮೇಲೆ ರಾಸಾಯನಿಕ ಗೊಬ್ಬರಗಳ ಕುರುಹು ಕೂಡ ಕಾಣಿಸುವುದಿಲ್ಲ. ಇದು ಅಪರೂಪವಾಗಿದ್ದರೂ ವಿಶೇಷವಾದ ಕೃಷಿ.
ಗೋಪಾಲ್ ಮತ್ತು ಪೂಂಗೋಡಿ ದಂಪತಿ ತಮ್ಮ 3 ಎಕರೆ (1.21 ಹೆಕ್ಟೇರ್) ಭೂಮಿಯಲ್ಲಿ ಸಾವಯವ ಕೃಷಿ ಮಾಡಿದ್ದಾರೆ. ಈಗಾಗಲೇ ಅನೇಕರು ಇವರ ತೋಟದಿಂದ ತರಕಾರಿಗಳನ್ನು ಖರೀದಿಸಲು ಮುಂದಾಗಿದ್ದು, ಲಾಭದಾಯಕ ಕೃಷಿಗೆ ಈ ದಂಪತಿ ಮುನ್ನುಡಿ ಬರೆದಿದ್ದಾರೆ.
ಕೃಷಿಭೂಮಿಯ ಒಂದು ತುದಿಯಲ್ಲಿ ಗೋಪಾಲ್ ಅವರು ದನದ ಶೆಡ್ ನಿರ್ಮಿಸಿದ್ದಾರೆ. ಅಲ್ಲಿ ದೇಸೀ ತಳಿಯ ದನ, ಎತ್ತುಗಳಿದ್ದು, ಅದರ ಸಗಣಿ ಮತ್ತು ಗೋಮೂತ್ರವನ್ನು ಒಂದು ಹೊಂಡದಲ್ಲಿ ಶೇಖರಿಸಿಡುತ್ತಾರೆ. ಬಳಿಕ ಅದನ್ನು ಕೃಷಿ ಭೂಮಿಗೆ ಸಿಂಪಡಿಸುತ್ತಾರೆ. ಇನ್ನು ಈ ಕುರಿತು ಮಾತನಾಡಿದ ಅವರು, “ನಾವು ಉತ್ತಮ ನೀರಾವರಿಯೊಂದಿಗೆ ಕೃಷಿಯನ್ನು ನಡೆಸುತ್ತೇವೆ. ಬೆಂಡೆಕಾಯಿ, ಕುಂಬಳಕಾಯಿ, ಪಡುವಲಕಾಯಿ, ರಿಡ್ಜ್ ಸೋರೆಕಾಯಿ, ಹಾಗಲಕಾಯಿ, ಬದನೆಕಾಯಿ, ಈರುಳ್ಳಿ, ಧನಿಯಾ ಮತ್ತು ವಿವಿಧ ರೀತಿಯ ಸೊಪ್ಪಿನಂತಹ ತರಕಾರಿಗಳನ್ನು ಬೆಳೆಸುತ್ತೇವೆ. ನಾವು ಒಂದು ಹನಿ ರಾಸಾಯನಿಕ ಗೊಬ್ಬರವನ್ನೂ ಬಳಸುವುದಿಲ್ಲ ” ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ತಮ್ಮ ಸಾವಯವ ಕೃಷಿ ಬಗ್ಗೆ ಮಾತನಾಡಿದ ಪೂಂಗೊಡಿ, ಜೀವಗ್ರಿ, ಕೌಡಂಗ್ ಮತ್ತು ದೇಸಿ ದನದ ಗೋಮೂತ್ರ, ಹುರುಳಿ ಹಿಟ್ಟನ್ನು ನೀರಿನಲ್ಲಿ ಮಿಶ್ರಣ ಮಾಡಿ 48 ಗಂಟೆಗಳ ಕಾಲ ಶೇಖರಿಸಿಡುತ್ತೇವೆ. ಬಳಿಕ ಅದನ್ನು ಹನಿ ನೀರಾವರಿ ಪದ್ದತಿ ಮೂಲಕ ಸಿಂಪಡಿಸುತ್ತೇವೆ. ಇನ್ನು ಕೀಟಗಳ ನಿಯಂತ್ರಣಕ್ಕಾಗಿ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಒಡೆದುಹಾಕಿ, ಅದನ್ನು ಸಾಕಷ್ಟು ಪ್ರಮಾಣದ ನೀರಿನಲ್ಲಿ ಬೆರೆಸಿ ಬೆಳೆಗಳ ಮೇಲೆ ಸಿಂಪಡಿಸುತ್ತೇವೆ, ”ಎಂದು ಕೀಟ ನಿಯಂತ್ರಣದ ಟಿಪ್ಸ್ ಕೊಟ್ಟರು
ಇನ್ನು ಹೆಚ್ಚುವರಿ ಆದಾಯಕ್ಕಾಗಿ, ಸ್ಥಳೀಯ ಕೋಳಿ ಪ್ರಭೇದಗಳನ್ನ ಸಾಕಿಕೊಂಡಿದ್ದಾರೆ ಈ ದಂಪತಿ.