ನವದೆಹಲಿ: ಪ್ರಾದೇಶಿಕ ಭಾಷೆಗಳಲ್ಲೇ ಸಂಹವನ ನಡೆಸುವ ಮೂಲಕ ಕೊರೊನಾ ವೈರಸ್ ವಿರುದ್ಧ ಜಾಗೃತಿ ಮೂಡಿಸಿ ಪ್ರತಿಯೊಬ್ಬರಿಗೂ ಅರಿವು ಮೂಡಿಸಬೇಕು ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಶುಕ್ರವಾರ ಸಶಕ್ತ ಗುಂಪುಗಳಿಗೆ ನಿರ್ದೇಶನ ನೀಡಿದೆ.
ಸಾಂಕ್ರಾಮಿಕ ರೋಗದ ಪರಿಣಾಮ ಎದುರಿಸಲು ದೇಶಾದ್ಯಂತ ಸಮಯೋಚಿತ ಮಾಹಿತಿ ಪ್ರಸಾರ, ಕೈಗೊಂಡ ಕ್ರಮಗಳು ಸಿದ್ಧತೆಗಳನ್ನು ಪರಿಶೀಲಿಸಬೇಕು ಎಂದು ಕಚೇರಿ ಒತ್ತಿ ಹೇಳಿದೆ. ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿರುವ ನಡುವೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಅಗತ್ಯ ವಸ್ತುಗಳ ಸರಬರಾಜು ಮತ್ತು ಸರುಕು ಸಾಗಣೆ, ರೈತರು ತಮ್ಮ ಉತ್ಪನ್ನಗಳನ್ನು ಕೊಯ್ಲು ಮಾಡುವಾಗ, ಕಾರ್ಮಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಕೈಗೊಳ್ಳಬೇಕಾದ ಮಾರ್ಗಸೂಚಿಗಳ ಕುರಿತು ಚರ್ಚೆ ನಡೆಸಲಾಯಿತು.
ಕೋವಿಡ್-19 ಹರಡುವಿಕೆ ಪರಿಣಾಮವಾಗಿ ಉದ್ಭವಿಸುವ ಸವಾಲುಗಳನ್ನು ಎದುರಿಸಲು ಸಶಕ್ತ ಗುಂಪುಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಿಶ್ರಾ ಈ ವಿಷಯಗಳ ಬಗ್ಗೆ ಚರ್ಚಿಸಿದರು.
ಸಮಸ್ಯೆ ಉಂಟಾದ ಪ್ರದೇಶಗಳನ್ನು ಗುರುತಿಸಲು ಮತ್ತು ಪರಿಣಾಮಕಾರಿ ಪರಿಹಾರಗಳನ್ನು ಒದಗಿಸಲು, ನೀತಿಯನ್ನು ವಿವರಿಸಲು, ಯೋಜನೆಗಳನ್ನು ರೂಪಿಸಲು, ಕಾರ್ಯಾಚರಣೆಗಳನ್ನು ಕಾರ್ಯತಂತ್ರಗೊಳಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ಆಯಾ ಪ್ರದೇಶದಲ್ಲಿ ಕಡ್ಡಾಯವಾಗಿ ಜಾರಿ ತರಬೇಕು ಎಂದು ಸೂಚಿಸಿದರು. ಇದಕ್ಕಾಗಿ ಹಿರಿಯ ಅಧಿಕಾರಿಗಳ ಗುಂಪೊಂದು ಕಾರ್ಯನಿರ್ವಹಿಸಲಿದೆ.
ಕ್ಯಾಬಿನೆಟ್ ಕಾರ್ಯದರ್ಶಿಯ ಮಾರ್ಗದರ್ಶನದ ಮೂಲಕ 11 ಗುಂಪುಗಳನ್ನು ರಚಿಸಲಾಗಿದೆ. ಒಟ್ಟು 80 ಹಿರಿಯ ನಾಗರಿಕ ಸೇವಕರನ್ನು ನಿಯೋಜಿಸಲಾಗಿದೆ.