ಇಟಾನಗರ : ರಾಜ್ಯದ ಆರ್ಥಿಕ ಅಭಿವೃದ್ಧಿಗಾಗಿ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ತೊಡಗಿಕೊಳ್ಳಲು ಯುವಕರನ್ನು ಉತ್ತೇಜಿಸುವಂತೆ ಅರುಣಾಚಲ ಪ್ರದೇಶದ ಗವರ್ನರ್ ಬ್ರಿಗೇಡಿಯರ್ (ನಿವೃತ್ತ) ಡಾ. ಬಿ.ಬಿ ಮಿಶ್ರಾ ರಾಜ್ಯ ಕೃಷಿ ಸಚಿವ ಟೇಜ್ ಟಾಕಿಗೆ ನಿರ್ದೇಶಿಸಿದ್ದಾರೆ.
ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಮೂಲಕ ರಾಜ್ಯವನ್ನು ಸ್ವಾವಲಂಬಿಯನ್ನಾಗಿ ಮಾಡುವ ಬಗ್ಗೆ ರಾಜಭವನದಲ್ಲಿ ನಡೆದ ಚರ್ಚೆಯಲ್ಲಿ ಸಚಿವರಿಗೆ ರಾಜ್ಯಪಾಲರು ಈ ರೀತಿ ಮಾರ್ಗದರ್ಶನ ನೀಡಿದ್ದಾರೆ.
ಯುವಕರನ್ನು ಪ್ರೇರೇಪಿಸಲು ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಪಶು ವೈದ್ಯಕೀಯ, ಡೈರಿ ಅಭಿವೃದ್ಧಿ ಮತ್ತು ಮೀನುಗಾರಿಕೆ ಇಲಾಖೆಗಳ ಅಧಿಕಾರಿಗಳು ತಮ್ಮ ಮಿತಿಗಳನ್ನು ದಾಟಿ ಕಾರ್ಯನಿರ್ವಹಿಸಲು ಸೂಚಿಸಬೇಕು. ದೊಡ್ಡ ಏಲಕ್ಕಿ ಬೆಳೆಯಲು ಮತ್ತು ಮಾರಾಟ ಮಾಡಲು ರೈತರಿಗೆ ಬೆಂಬಲ ನೀಡುವ ವ್ಯವಸ್ಥೆಯನ್ನು ರಚಿಸಬೇಕು. ಇದರಿಂದ ರೈತರ ಆದಾಯ ಹೆಚ್ಚಾಗುತ್ತದೆ. ರೈತರ ಉತ್ಪನ್ನಗಳನ್ನು ನೇರವಾಗಿ ಖರೀದಿಸಲು ಮತ್ತು ಮಾರಾಟ ಮಾಡಲು ಸರ್ಕಾರವು ಹೆಚ್ಚಿನ ಮಾರ್ಗಗಳನ್ನು ಅನ್ವೇಷಿಸಬೇಕು ಎಂದು ರಾಜ್ಯಪಾಲರು ಸಚಿವರಿಗೆ ಸಲಹೆ ನೀಡಿದ್ದಾರೆ. ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಅಭಿವೃದ್ದಿಗಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಸಚಿವ ಟೇಜ್ ಟಾಕಿ ರಾಜ್ಯಪಾಲರಿಗೆ ವಿವರಿಸಿದರು.