ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ನಗರದ ಹೊರವಲಯದಲ್ಲಿ ಉಗ್ರಗಾಮಿಗಳೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಕಮಾಂಡರ್ ಒಬ್ಬನನ್ನು ಭದ್ರತಾ ಪಡೆಗಳು ಕೊಂದು ಹಾಕಿವೆ. ರವಿವಾರ ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಹಿಜ್ಬುಲ್ ಕಮಾಂಡರ್ ಡಾ. ಸೈಫುಲ್ಲಾ ಹತನಾಗಿದ್ದು, ಇದು ಭದ್ರತಾ ಪಡೆಗಳಿಗೆ ಸಿಕ್ಕ ಬಹುದೊಡ್ಡ ಮೇಲುಗೈ ಎಂದು ಹೇಳಲಾಗಿದೆ.
ಕಳೆದ ಮೇ ತಿಂಗಳಲ್ಲಿ ಉಗ್ರ ರಿಯಾಜ್ ನಾಯ್ಕೂ ಯೋಧರ ಕೈಯಲ್ಲಿ ಹತನಾದ ನಂತರ ಈ ಡಾ. ಸೈಫುಲ್ಲಾ ಸಂಘಟನೆಯ ನೇತೃತ್ವ ವಹಿಸಿಕೊಂಡಿದ್ದ ಎಂದು ಕಾಶ್ಮೀರ ಐಜಿಪಿ ವಿಜಯ ಕುಮಾರ ಸುದ್ದಿಗಾರರಿಗೆ ತಿಳಿಸಿದರು.
ಶ್ರೀನಗರ ಹೊರವಲಯದ ಹಳೆಯ ವಿಮಾನ ನಿಲ್ದಾಣ ಬಳಿ ಉಗ್ರರು ಅಡಗಿರುವ ಖಚಿತ ಮಾಹಿತಿಯ ಮೇರೆಗೆ ರವಿವಾರ ಬೆಳಗ್ಗೆ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದು ಉಗ್ರರಿಗಾಗಿ ಹುಡುಕಾಟ ಆರಂಭಿಸಿದ್ದವು. ಈ ಸಂದರ್ಭದಲ್ಲಿ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ಆರಂಭಿಸಿದ್ದಾರೆ. ಈ ಹಂತದಲ್ಲಿ ಪ್ರತಿಯಾಗಿ ದಾಳಿ ನಡೆಸಿದ ಯೋಧರ ಗುಂಡಿಗೆ ಸೈಫುಲ್ಲಾ ಬಲಿಯಾಗಿದ್ದಾನೆ ಎಂದು ಐಜಿಪಿ ಮಾಹಿತಿ ನೀಡಿದರು.
ಎನ್ಕೌಂಟರ್ ನಡೆದ ಸ್ಥಳದಿಂದ ಉಗ್ರರ ಅಪಾರ ಪ್ರಮಾಣದ ಮದ್ದು ಗುಂಡು ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.