ನವದೆಹಲಿ : ಮಾರುತಿ ಸುಜುಕಿಯ ಮಾನೇಸರ್ ಘಟಕದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ ಎಂದು ಕಂಪನಿಯ ವಕ್ತಾರರು ಖಚಿತಪಡಿಸಿದ್ದಾರೆ.
ಇದು ಕಂಪನಿಯ ಎರಡನೇ ಸೋಂಕಿನ ಪ್ರಕರಣವಾಗುವ ಸಾಧ್ಯತೆ ಇದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ವ್ಯವಹಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.
ಲಾಕ್ಡೌನ್ನಿಂದಾಗಿ ಸುಮಾರು 50 ದಿನಗಳ ಕಾಲ ಕಂಪನಿಯನ್ನು ಮುಚ್ಚಲಾಗಿತ್ತು, ಇದೀಗ ದೇಶದ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಈ ತಿಂಗಳ ಆರಂಭದಲ್ಲಿ ಪುನಃ ಮಾನೇಸರ್ ಸೌಲಭ್ಯವನ್ನು ತೆರೆದಿದೆ.
"ಕಂಪನಿಯ ಮಾನೇಸರ್ ಸ್ಥಾವರದ ಉದ್ಯೋಗಿಗೆ ಮೇ 22 ರಂದು ನಡೆದ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ" ಎಂದು ಸಂಸ್ಥೆಯ ವಕ್ತಾರರು ಮಾಹಿತಿ ನೀಡಿದ್ದಾರೆ.
ಈ ಉದ್ಯೋಗಿ ಕೊನೆಯ ಬಾರಿ ಮೇ 15 ರಂದು ಆರೋಗ್ಯವಾಗಿ ಕಂಪನಿ ಕೆಲಸಕ್ಕೆ ಹಾಜರಾಗಿದ್ದರು. ನಂತರ ಅವರ ನಿವಾಸದ ಪ್ರದೇಶವನ್ನು ಕಂಟೇನ್ಮೆಂಟ್ ಝೋನ್ ವಲಯಕ್ಕೆ ಬಂದಿತು. ಅದಾದ ಬಳಿಕ ಅವರು ಕೆಲಸಕ್ಕೆ ಹಾಜರಾಗಲಿಲ್ಲ ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ ದಾಖಲಾದ ನೌಕರನ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದೆ. ಸದ್ಯ ಅವರ ಸ್ಥಿತಿ ಉತ್ತಮವಾಗಿದ್ದು, ಚಿಕೆತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದಿದ್ದಾರೆ. ಸೋಂಕಿತರಿಗೆ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಎಂಎಸ್‌ಐ ಎಲ್ಲಾ ರೀತಿಯ ಸಹಾಯವನ್ನು ನೀಡುತ್ತಿದೆ ಎಂದು ವಕ್ತಾರರು ತಿಳಿಸಿದರು.