ಆಂಧ್ರಪ್ರದೇಶ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಏಲೂರು ಪಟ್ಟಣದಲ್ಲಿ ಕಾಣಿಸಿಕೊಂಡ ನಿಗೂಢ ಕಾಯಿಲೆಗೆ ಇದೀಗ ಕಾರಣ ತಿಳಿದು ಬಂದಿದೆ. ಆಹಾರ ಮತ್ತು ನೀರಿನಲ್ಲಿ ಕೀಟನಾಶಕ ಸೇರ್ಪಡೆಯಾಗಿ ದೇಹವನ್ನು ಸೇರಿರುವುದೇ ಈ ದುರಂತಕ್ಕೆ ಕಾರಣ ಎಂದು ದೆಹಲಿಯ ಏಮ್ಸ್ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ (ಐಐಸಿಟಿ) ಸ್ಪಷ್ಟಪಡಿಸಿದೆ.
ಏಲೂರು ಪಟ್ಟಣದಲ್ಲಿ ಡಿಸೆಂಬರ್ 5 ರಿಂದ ಕಾಣಿಸಿಕೊಂಡ ನಿಗೂಢ ಕಾಯಿಲೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಏಕಾಏಕಿ ಏಲೂರು ಪಟ್ಟಣದ ಜನರು ಮೂರ್ಛೆ ತಪ್ಪಿ, ಬಾಯಲ್ಲಿ ನೊರೆ ಬಂದು ಅಸ್ವಸ್ಥರಾಗುತ್ತಿದ್ದರು. ಈ ದುರಂತದ ಕುರಿತು ಅಧ್ಯಯನ ನಡೆಸಿದ ಏಮ್ಸ್ (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ) ಮತ್ತು ಐಐಸಿಟಿ ಕಾಯಿಲೆಗೆ ಮುಖ್ಯ ಕಾರಣ ಏನು ಎಂಬುದನ್ನು ತಿಳಿಸಿದೆ.
ಈ ಹಿನ್ನೆಲೆ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ ರೆಡ್ಡಿ ಅವರು ಇಂದು ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ತಜ್ಞರು ಮತ್ತು ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ, ಸೂಕ್ತ ಮಾಹಿತಿ ಪಡೆದುಕೊಂಡರು. ಈ ವೇಳೆ, ಆರೋಗ್ಯ ಸಚಿವ ಅಲ್ಲಾ ನಾನಿ, ಮುನ್ಸಿಪಾಲ್ ಸಚಿವ ಬೊಚ್ಚಾ ಸತ್ಯನಾರಾಯಣ, ಮುಖ್ಯ ಕಾರ್ಯದರ್ಶಿ ನೀಲಂ ಸಹಾನಿ, ಜಲಸಂಪನ್ಮೂಲ ಕಾರ್ಯದರ್ಶಿಗಳು, ಪುರಸಭೆ, ಕೃಷಿ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಜನರು ಮತ್ತು ಪ್ರಾಣಿಗಳ ರಕ್ತದ ಮಾದರಿಗಳಲ್ಲಿ ಎಂಡೋ ಸಲ್ಫಾನ್ ಮತ್ತು ಡಿಡಿಡಿ ಇರುವುದು ಕಂಡು ಬಂದಿದೆ ಎಂದು ಐಐಸಿಟಿ ತಿಳಿಸಿದೆ. ಇನ್ನು ಕೀಟನಾಶಕ ಬಳಸಿದ ತರಕಾರಿಗಳ ಸೇವಿಸಿರುವುದರಿಂದ ಘಟನೆ ನಡೆದಿದೆ. ಈ ಹಿನ್ನೆಲೆ ಮಣ್ಣಿನ ಮಾದರಿಗಳ ಪರೀಕ್ಷೆ ನಡೆಯುತ್ತಿದೆ ಎಂದು ಎನ್ಐಎನ್ ತಜ್ಞರು ಹೇಳಿದ್ದಾರೆ.
ಸಾವಯವ ಕೃಷಿ ಪ್ರೋತ್ಸಾಹಿಸಿ:
ಏಲೂರು ಸಮಸ್ಯೆಯನ್ನು ಗಣನೆಗೆ ತೆಗೆದುಕೊಂಡು ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಮತ್ತೆ ಮರುಕಳಿಸದಂತೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳನ್ನು ಬಲಪಡಿಸಿ, ಕಾಲಕಾಲಕ್ಕೆ ಪರೀಕ್ಷೆಗಳನ್ನು ನಡೆಸುವುದು ಮತ್ತು ಮೂರು ಪ್ರದೇಶಗಳಲ್ಲಿ ಲ್ಯಾಬ್‌ಗಳನ್ನು ಸ್ಥಾಪಿಸುವುದು. ಸಾವಯವ ಕೃಷಿಯನ್ನು ಉತ್ತೇಜಿಸಲು ರೈತರಿಗೆ ಜಾಗೃತಿ ಮೂಡಿಸಬೇಕು. ಜೊತೆಗೆ ಅನಾರೋಗ್ಯಕ್ಕೆ ಕಾರಣವಾಗುವ ಕೀಟನಾಶಕಗಳನ್ನು ಮಾರುಕಟ್ಟೆಯಿಂದ ತೆಗೆದು ಹಾಕುವಂತೆ ವಿಶೇಷ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದನ್ನೂ ಓದಿ:ಬಯಲಾಯ್ತು ರಹಸ್ಯ.. ಏಲೂರು ನಿಗೂಢ ಕಾಯಿಲೆಯ ಹಿಂದಿತ್ತು 'ಕೀಟನಾಶಕ'!