ನವದೆಹಲಿ: ಅಮ್ನೇಶಿಯಾದಿಂದ (ಮರೆಗುಳಿತನ) ಬಳಲುತ್ತಿರುವ 86 ವರ್ಷದ ವೃದ್ಧರೊಬ್ಬರು ಮನೆಯಿಂದ ನಾಪತ್ತೆಯಾದ ಕೆಲವೇ ಗಂಟೆಗಳಲ್ಲಿ ಅವರನ್ನು ಪೊಲಿಸರು ಮನೆಗೆ ಸೇರಿಸಿದ್ದಾರೆ.
ದಕ್ಷಿಣ ದೆಹಲಿಯ ಸಾದಿಕ್ ನಗರ ಪ್ರದೇಶದ ಮನೆಯಿಂದ ನಾಪತ್ತೆಯಾದ ವೃದ್ಧನನ್ನು ಮರಳಿ ಮನೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಧು ರಾಮ್(86) ನಾಪತ್ತೆಯಾಗಿದ್ದಾರೆ ಎಂದು ಅವರ ಪುತ್ರ ಪುರುಷೋತ್ತಮ್ ಡಿಫೆನ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ವರದಿ ದಾಖಲಿಸಿದ್ದರು ಎಂದು ಉಪ ಪೊಲೀಸ್ ಆಯುಕ್ತ ಅತುಲ್ ಕುಮಾರ್ ಠಾಕೂರ್ ತಿಳಿಸಿದ್ದಾರೆ.
ನಾಪತ್ತೆಯಾದ ವೃದ್ಧನ ವಿವರಗಳು ಮತ್ತು ಫೋಟೋವನ್ನು ಪೊಲೀಸ್ ಠಾಣೆಗಳ ವಾಟ್ಸಾಪ್ ಗ್ರೂಪ್ಗಳಲ್ಲಿ ಶೇರ್ ಮಾಡಲಾಗಿತ್ತು. ವೃದ್ಧನ ಮನೆಯಿಂದ ಸ್ವಲ್ಪ ದೂರದಲ್ಲಿದ್ದ ರತನ್ ಲಾಲ್ ಸಾಹದೇವ್ ಮಾರ್ಗದ ಕೋಟ್ಲಾ ಫ್ಲೈಓವರ್ ಬಳಿ ಪೊಲಿಸ್ ಸಿಬ್ಬಂದಿ ವೃದ್ಧನನ್ನು ಪತ್ತೆ ಹಚ್ಚಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಅತುಲ್ ಕುಮಾರ್ ಠಾಕೂರ್ ತಿಳಿಸಿದ್ದಾರೆ.
ನಾಪತ್ತೆಯಾಗಿದ್ದ ವೃದ್ಧನಿಗೆ ತನ್ನ ಹೆಸರು ಕೂಡಾ ನೆನಪಿರಲಿಲ್ಲ. ಫೊಟೋ ಮೂಲಕ ಗುರುತಿಸಿ ಮನೆಗೆ ಸೇರಿಸಲಾಗಿದೆ ಎಂದು ಅತುಲ್ ಕುಮಾರ್ ಹೇಳಿದ್ದಾರೆ.