ನವದೆಹಲಿ: ಬಿಜೆಪಿ ನಾಯಕನೋರ್ವರಿಗೆ ತಮ್ಮ ಗಡ್ಡವನ್ನು ಬೋಳಿಸಿಕೊಳ್ಳುವಂತೆ ಅಪರಿಚಿತ ದುಷ್ಕರ್ಮಿಗಳು ಬೆದರಿಕೆ ಹಾಕಿರುವ ಘಟನೆ ಈಶಾನ್ಯ ದೆಹಲಿಯ ಜಾಫ್ರಾಬಾದ್ ಪ್ರದೇಶದಲ್ಲಿ ತಡರಾತ್ರಿ ನಡೆದಿದೆ.
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಈಶಾನ್ಯ ದೆಹಲಿ ಘಟಕದ ಉಪಾಧ್ಯಕ್ಷ ಸಾಜಿದ್ ಅಲಿ ಹೀಗೆ ಬೆದರಿಕೆಗೆ ಒಳಗಾದ ಬಿಜೆಪಿ ನಾಯಕ. ಈ ಕುರಿತು ಈಟಿವಿ ಭಾರತ್ ಜೊತೆ ಮಾತನಾಡಿರುವ ಸಾಜಿದ್ ಅಲಿ, ತಡರಾತ್ರಿ ಸುಮಾರು 12.15 ರ ವೇಳೆ ನಾನು ಮನೆಯ ಹೊರಗಡೆ ಬಂದ ವೇಳೆಯಲ್ಲಿ, ಅಲ್ಲೇ ಬೀದಿಯಲ್ಲಿ ಕುಳಿತಿದ್ದ ಕೆಲವರು ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೇ, ಗಡ್ಡ ಬೋಳಿಸು ಇಲ್ಲಾ ಪಕ್ಷ ಬಿಡು ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ನಾನು ಜನರ ಸೇವೆಗಾಗಿ ಕೆಲಸ ಮಾಡುತ್ತೇನೆ ಹೊರತು ನನ್ನ ಸ್ವಂತ ಹಿತಾಸಕ್ತಿಗಾಗಿ ಅಲ್ಲ. ನೀವು ಯಾಕೆ ಈ ರೀತಿ ವರ್ತಿಸುತ್ತಿದ್ದೀರಾ ಎಂದು ದುಷ್ಕರ್ಮಿಗಳನ್ನ ಪ್ರಶ್ನಿಸಿದೆ. ಅದಕ್ಕೆ ಅವರು, ಗಡ್ಡ ಬೋಳಿಸಲು ಆಗದಿದ್ದರೆ ಬಿಜೆಪಿ ಬಿಟ್ಟು ಬೇರೆ ಯಾವುದಾದರೂ ಪಕ್ಷಕ್ಕೆ ಸೇರು ಎಂದರು. ಅಷ್ಟೇ ಅಲ್ಲದೇ ಅವರು ಪ್ರಧಾನಿ ಮೋದಿಯವರನ್ನು ಸಹ ನಿಂದಿಸಿದರು ಎಂದು ತಿಳಿಸಿದರು.
ಇನ್ನು ಅಲಿ ಅವರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಕುರಿತು ಪಕ್ಷದ ಹಿರಿಯ ಮುಖಂಡರು ಎಚ್ಚೆತ್ತುಕೊಂಡು ತಮಗೆ ಸಂಪೂರ್ಣ ಬೆಂಬಲ ನೀಡುವಂತೆ ಆಗ್ರಹಿಸಿದ್ದಾರೆ.