ರಾಂಚಿ(ಜಾರ್ಖಂಡ): ವಾಮಾಚಾರ ಅಭ್ಯಾಸ ಮಾಡುವ ಉದ್ದೇಶದಿಂದ ವ್ಯಕ್ತಿಯೋರ್ವ ಒಂದೇ ಕುಟುಂಬದ ಎಂಟು ಮಂದಿಯ ಕೊಲೆ ಮಾಡಿದ್ದಾನೆಂಬ ಆರೋಪ ಕೇಳಿ ಬಂದಿದೆ. ಜಾರ್ಖಂಡ್ನ ಚೈಬಾಸ್ದಲ್ಲಿ ಈ ಭೀಕರ ದುರ್ಘಟನೆ ನಡೆದಿದೆ.
ಮುಫಾಸಿಲ್ ಪೊಲೀಸ್ ಠಾಣಾ ಪ್ರದೇಶದ ನಕ್ಸಲ್ ಪೀಡಿತ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕಳೆದ 10 ದಿನಗಳ ಹಿಂದೆ ಗುಮ್ಡಿ ಸುರಿನ್ ಮನೆಗೆ ಬಂದಿದ್ದ ಆತನ ಚಿಕ್ಕಪ್ಪ, ತನ್ನ ಸೋದರ ಮಾವ, ಇಬ್ಬರು ಸೊಸೆಯರು, ಇಬ್ಬರು ಸೋದರಳಿಯರು ಮತ್ತು ಮೂವರು ಮೊಮ್ಮಕ್ಕಳನ್ನ ಕೊಂದಿದ್ದಾನೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಸುರಿನ್ ಮಾಹಿತಿ ನೀಡಿದ್ದು, ತನ್ನ ಹೆಂಡತಿಯನ್ನ ಚಿಕ್ಕಪ್ಪ ಕೊಲೆ ಮಾಡಿ, ಚಿಕ್ಕಮ್ಮನ ಮೇಲೆ ಅತ್ಯಾಚಾರ ಎಸಗಿದ್ದಾನೆಂದು ಆರೋಪಿಸಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತ್ಗೆ ಪ್ರತಿಕ್ರಿಯೆ ನೀಡಿರುವ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಅಮರ್ ಕುಮಾರ್ ಪಾಂಡೆ, ಅತ್ಯಾಚಾರದಂತಹ ಯಾವುದೇ ಕೃತ್ಯ ನಡೆದಿಲ್ಲ. ಸುರಿನ್ ಕುಟುಂಬ ಹಲವಾರು ವರ್ಷಗಳಿಂದ ವಾಮಾಚಾರದಲ್ಲಿ ಭಾಗಿಯಾಗಿದ್ದು, ಒಂದು ವರ್ಷದ ಹಿಂದೆ ಸುರಿನ್ ಅವರ ತಂದೆಯನ್ನ ಇದೇ ರೀತಿಯಲ್ಲಿ ಕೊಲ್ಲಲಾಗಿತ್ತು ಎಂದಿದ್ದಾರೆ.
1990ರಿಂದ 2000ರದವರೆಗೆ ಜಾರ್ಖಂಡ್ನಲ್ಲಿ ಮಾಟಗಾತಿ ಎಂಬ ಹೆಸರಿನಲ್ಲಿ 522 ಮಹಿಳೆಯರ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದ್ದು, 2000ರಿಂದ 2019ರವರೆಗೆ ಸುಮಾರು 1800 ಮಹಿಳೆಯರು ಸಾವನ್ನಪ್ಪಿದ್ದಾರೆ. ಚೈಬಾಸ್ನಲ್ಲೇ 233 ಮಹಿಳೆಯರ ಕೊಲೆ ಸಹ ನಡೆದಿದೆ ಎಂದು ವರದಿಯಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.