ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಎಲ್ಲ ಶಾಲೆ - ಕಾಲೇಜುಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಡಿಸೆಂಬರ್ 31ರವರೆಗೆ ಮುಚ್ಚಲ್ಪಡುತ್ತವೆ ಎಂದು ಇಲ್ಲಿನ ಆಡಳಿತ ಮಂಡಳಿ ಆದೇಶಿಸಿ ಪ್ರಕಟಣೆ ಹೊರಡಿಸಿದೆ.
9-12ನೇ ತರಗತಿ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಬೇಕಾದರೆ ಶಾಲೆಗಳಿಗೆ ಭೇಟಿ ನೀಡಬಹುದು. ಆನ್‌ಲೈನ್ ಹಾಗೂ ದೂರ ಶಿಕ್ಷಣಕ್ಕೆ ಅನುಮತಿ ನೀಡಲಾಗುವುದು. ಕಂಟೇನ್‌ಮೆಂಟ್ ವಲಯಗಳಲ್ಲಿನ ಪ್ರದೇಶಗಳಲ್ಲಿ ಮಾತ್ರ ಆನ್‌ಲೈನ್ ಬೋಧನೆ, ಟೆಲಿ- ಕೌನ್ಸೆಲಿಂಗ್ ಸಂಬಂಧಿತ ಕೆಲಸಗಳಿಗಾಗಿ ಶೇ.50ರಷ್ಟು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಶಾಲೆಗಳಿಗೆ ಬರಬಹುದು.
ಲ್ಯಾಬ್ ಅಗತ್ಯವಿರುವ ವಿಜ್ಞಾನ ಮತ್ತು ತಾಂತ್ರಿಕ ವಿಭಾಗಗಳ ವಿದ್ಯಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾತ್ರ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಬರಲು ಅನುಮತಿ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಶೇ.50ರಷ್ಟು ಸಾಮರ್ಥ್ಯದೊಂದಿಗೆ ಚಿತ್ರಮಂದಿರಗಳನ್ನು ತೆರೆಯಬಹುದು. ಮದುವೆ ಸಮಾರಂಭಗಳಲ್ಲಿ ಗರಿಷ್ಠ 100 ಮಂದಿ ಪಾಲ್ಗೊಳ್ಳಬಹುದು. ಧಾರ್ಮಿಕ ಸ್ಥಳಗಳು ಸಾರ್ವಜನಿಕರಿಗಾಗಿ ಮುಕ್ತವಾಗಿರುತ್ತವೆ.
ಆದರೆ, ಮೆರವಣಿಗೆಗಳು, ದೊಡ್ಡ ಮಟ್ಟದ ಧಾರ್ಮಿಕ ಕೂಟಗಳನ್ನು ನಿಷೇಧಿಸಲಾಗಿದೆ. ರಸ್ತೆ, ರೈಲು ಅಥವಾ ವಿಮಾನದ ಮೂಲಕ ಪ್ರಯಾಣಿಕರು ಜಮ್ಮು - ಕಾಶ್ಮೀರ ಪ್ರವೇಶಿಸಲು ಯಾವುದೇ ನಿರ್ಬಂಧಗಳಿಲ್ಲ. ಆದರೆ, ಅವರು ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೊಳಗಾಗಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.