ನವದೆಹಲಿ: ರಸಗೊಬ್ಬರ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಲಯ ರಾಜಸ್ತಾನ ಸಿಎಂ ಅಶೋಕ್ ಗೆಹ್ಲೋಟ್ ಸಹೋದರ ಅಗ್ರಸೇನ್ ಗೆಹ್ಲೋಟ್ ಆಸ್ತಿ-ಪಾಸ್ತಿಗಳ ಮೇಲೆ ದಾಳಿ ಮಾಡಿದೆ.
ರಾಜಸ್ಥಾನ ಮಾತ್ರವಲ್ಲದೇ ಪಶ್ಚಿಮ ಬಂಗಾಳ, ಗುಜರಾತ್, ದೆಹಲಿಗಳಲ್ಲಿ ಸುಮಾರು 13 ಪ್ರದೇಶಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಇದರ ಜೊತೆಗೆ ರಸಗೊಬ್ಬರ ಹಗರಣದಲ್ಲಿ 7 ಕೋಟಿ ರೂಪಾಯಿ ತೆರಿಗೆ ದಂಡದ ಆರೋಪದಲ್ಲಿ ಜೋಧಪುರದಲ್ಲಿರುವ ಅಗ್ರಸೇನ್ ಗೆಹ್ಲೋಟ್ರ ಮನೆ ಮೇಲೆಯೂ ದಾಳಿ ಮಾಡಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಇದಕ್ಕೂ ಮೊದಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ತೆರಿಗೆ ಇಲಾಖೆ ದಾಖಲಿಸಿದ್ದ ದೂರು ಹಾಗೂ ಚಾರ್ಜ್ಶೀಟ್ ಆಧಾರದಲ್ಲಿ ಅಗ್ರಸೇನ್ ಗೆಹ್ಲೋಟ್ ಮೇಲೆ ದೂರನ್ನು ದಾಖಲಿಸಿಕೊಂಡಿದ್ದರು.
ಈಗ ರಾಜಸ್ಥಾನದಲ್ಲಿ 6 ಸ್ಥಳಗಳಲ್ಲಿ, ಗುಜರಾತ್ನಲ್ಲಿ 4, ಪಶ್ಚಿಮ ಬಂಗಾಳ ಹಾಗೂ ದೆಹಲಿಯಲ್ಲಿ ತಲಾ ಸ್ಥಳದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ, ತನಿಖೆ ನಡೆಸುತ್ತಿದ್ದಾರೆ.