ನವದೆಹಲಿ: ಪ್ರಚೋದನಕಾರಿ ಹಾಗೂ ದ್ವೇಷಪೂರಿತ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ವಿರುದ್ಧ ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಂಡಿದೆ.
ಚುನಾವಣಾ ಆಯೋಗದ ಆದೇಶದ ಪ್ರಕಾರ ಯೋಗಿ ಆದಿತ್ಯನಾಥ್ ಮುಂದಿನ 72 ಗಂಟೆ ಹಾಗೂ ಮಾಯಾವತಿ ಮುಂದಿನ 48 ಗಂಟೆಗಳ ಕಾಲ ಚುನಾವಣಾ ಭಾಷಣ ಮಾಡಬಾರದು ಎಂದಿದೆ. ಆಯೋಗದ ಆದೇಶ ನಾಳೆ ಮುಂಜಾನೆಯಿಂದ ಅನ್ವಯವಾಗಲಿದೆ.
ಏಪ್ರಿಲ್ 7ರಂದು ಸಹರಾನ್ಪುರದ ಪ್ರಚಾರ ಭಾಷಣದಲ್ಲಿ, ಮಹಾಘಟಬಂಧನಕ್ಕೆ ನಿಮ್ಮ ಮತ ನೀಡಿ, ಇನ್ನೊಂದು ಪಕ್ಷಕ್ಕಾಗಿ ನಿಮ್ಮ ಮತವನ್ನು ಹಂಚಿಕೊಳ್ಳದಿರಿ ಎಂದು ಮುಸ್ಲಿಂ ಮತದಾರರಲ್ಲಿ ಮಾಯಾವತಿ ಮನವಿ ಮಾಡಿದ್ದರು.
ಇದಾದ ಎರಡು ದಿನಗಳ ಬಳಿಕ ಮೀರತ್ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ, ಕಾಂಗ್ರೆಸ್, ಎಸ್ಪಿ ಹಾಗೂ ಬಿಎಸ್ಪಿ 'ಅಲಿ' ಮೇಲೆ ನಂಬಿಕೆ ಇರಿಸಿದ್ದರೆ ನಾವು 'ಭಜರಂಗ್ ಬಲಿ' ಮೇಲೆ ನಂಬಿಕೆ ಹೊಂದಿದ್ದೇವೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದರು ಎಂದು ಆಯೋಗ ಆದೇಶದ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.