ಮುಂಬೈ: ಕಳೆದ 30 ವರ್ಷಗಳಿಂದ ಅಪಘಾತ ರಹಿತವಾಗಿ ವಿಮಾನ ಚಾಲನೆ ಮಾಡಿ, ರಾಷ್ಟ್ರಪತಿಗಳಿಂದ ಚಿನ್ನದ ಪದಕ ಪಡೆದುಕೊಂಡಿದ್ದ ಪೈಲೆಟ್ ದೀಪಕ್ ವಸಂತ್ ಸಾಠೆ ನಿನ್ನೆ ದುರಂತ ಅಂತ್ಯ ಕಂಡಿದ್ದಾರೆ.
ದುಬೈಯಿಂದ ಸಿಬ್ಬಂದಿ ಸೇರಿ 191 ಪ್ರಯಾಣಿಕರ ಹೊತ್ತು ತರುತ್ತಿದ್ದ ವೇಳೆ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಅವಘಡಕ್ಕೆ ತುತ್ತಾಗಿತ್ತು. ಲ್ಯಾಂಡಿಂಗ್ ವೇಳೆ ಪ್ರತಿಕೂಲ ಹವಾಮಾನದ ಕಾರಣ ವಿಮಾನ ರನ್ವೇಯಿಂದ ಪಕ್ಕಕ್ಕೆ ಸರಿದು ಕಣಿವೆಗೆ ಜಾರಿ ಎರಡು ಹೋಳಾಗಿತ್ತು.
ಇದನ್ನೂ ಓದಿ: ಏರ್ ಇಂಡಿಯಾ ಫ್ಲೈಟ್ ಕ್ರ್ಯಾಶ್: ರಾಷ್ಟ್ರಪತಿ ಪದಕ ವಿಜೇತ ಪೈಲಟ್ ವಸಂತ್ ಸಾಠೆ ಸಾವು!
ಪುತ್ರನನ್ನು ಕಳೆದುಕೊಂಡ ತಾಯಿ ನೀಲಾ ಸಾಠೆ ಮಾತನಾಡಿ, ಆತ ಇತರರಿಗೆ ಸಹಾಯ ಮಾಡುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿ ಇರುತ್ತಿದ್ದ. ಈಗಲೂ ಆತನನ್ನು ಶಿಕ್ಷಕರು ನೆನಪಿಸಿಕೊಳ್ಳುತ್ತಾರೆ ಎಂದು ಸ್ಮರಿಸಿ ಕಣ್ಣೀರು ಹಾಕಿದರು.
ದೀಪಕ್ ವಸಂತ ಸಾಠೆ ಕೇರಳದ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಈ ಹಿಂದೆ 20ಕ್ಕೂ ಹೆಚ್ಚು ಬಾರಿ ವಿಮಾನ ಲ್ಯಾಂಡ್ ಮಾಡಿದ್ದರು. ಆದರೆ ನಿನ್ನೆ ನಡೆದ ದುರಂತದಲ್ಲಿ ಅವರು ಸಾವನ್ನಪ್ಪಿದ್ದಾರೆ.
ಜಮ್ಮುವಿನಲ್ಲಿ ಹುತಾತ್ಮರಾಗಿದ್ದ ವಸಂತ್ ಸಾಠೆ ಸಹೋದರ!
ಇನ್ನು ಇವರು ಸಹೋದರ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ವಿಕಾಸ್ ವಸಂತ್ ಸಾಠೆ ಇಂಡಿಯನ್ ಆರ್ಮಿಯಲ್ಲಿ ಕರ್ನಲ್ ಆಗಿ ಜಮ್ಮುವಿನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಕೆಲ ವರ್ಷಗಳ ಹಿಂದೆ ಹುತಾತ್ಮರಾಗಿದ್ದಾರೆ.