ಹಿಂದೌನ್ (ರಾಜಸ್ಥಾನ): ಸಾರ್ವಜನಿಕ ಕುಂದುಕೊರತೆಗಳನ್ನು ಆಲಿಸುವ ವೇಳೆ ಶಾಸಕರೊಬ್ಬರ ಮೇಲೆ ದುಷ್ಕರ್ಮಿಯೊಬ್ಬ ಫೈರಿಂಗ್ ನಡೆಸಲು ಯತ್ನಿಸಿ ಪರಾರಿಯಾದ ಘಟನೆ ಹಿಂದೌನ್ ನಗರದ ಶಾಸಕರ ನಿವಾಸದಲ್ಲಿ ನಡೆದಿದೆ. ದೇಶಿ ಪಿಸ್ತೂಲ್ನಿಂದ ಗುಂಡಿನ ದಾಳಿಗೆ ಯತ್ನಿಸಲಾಗಿದೆ.
ಹಿಂದೌನ್ ನಗರದ ಕಾಂಗ್ರೆಸ್ ಶಾಸಕ ಭರೋಸಿ ಲಾಲ್ ಜತವ್ ಮೇಲೆ ಫೈರಿಂಗ್ ಯತ್ನ ನಡೆದಿದ್ದು, ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಮಂಡಿ ಪೊಲೀಸ್ ಠಾಣೆಯ ಉಸ್ತುವಾರಿ ರಾಮರೂಪ್ ಮೀನಾ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಭರೋಸಿ ಸಿಂಗ್ ಜತವ್ ಇಂದು ಬೆಳಗ್ಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಓಂಪ್ರಕಾಶ್ ಮಾಮು ಹಾಗೂ ಆಜ್ಮಾನ್ ಎಂಬುವರ ಜೊತೆಗೆ ಸಾರ್ವಜನಿಕ ಕುಂದುಕೊರತೆಯನ್ನು ಆಲಿಸುತ್ತಿದ್ದೆ. ಈ ವೇಳೆ ಓರ್ವ ಯುವಕ ದೇಶಿ ಪಿಸ್ತೂಲ್ನಿಂದ ಫೈರಿಂಗ್ ನಡೆಸಲು ಮುಂದಾಗಿದ್ದ. ಕಾಟ್ರಿಡ್ಜ್ ಕೆಳಗೆ ಬಿದ್ದ ಕಾರಣ ಆತ ಪರಾರಿಯಾಗಿದ್ದಾನೆ ಎಂದಿದ್ದಾರೆ.
ಈ ವೇಳೆ ಶಾಸಕರ ನಿವಾಸದ ಹೊರಗೆ ಬೈಕ್ ಬಳಿ ನಿಂತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಫೈರಿಂಗ್ಗೆ ಯತ್ನಿಸಿದವನ ಗುರುತು ಪತ್ತೆಯಾಗಿದ್ದು ಪೊಲೀಸರು ಶೋಧಕಾರ್ಯದಲ್ಲಿ ತೊಡಗಿದ್ದಾರೆ.