ನವದೆಹಲಿ: ತೆರೆದ ಪುಸ್ತಕ ಪರೀಕ್ಷಾ ಕ್ರಮಕ್ಕಾಗಿ ಅಂತಿಮ ವರ್ಷದ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುವಂತೆ ದೆಹಲಿ ವಿಶ್ವವಿದ್ಯಾಲಯ ಎಲ್ಲಾ ವಿಭಾಗದ ಮುಖ್ಯಸ್ಥರಿಗೆ ಸೋಮವಾರ ನಿರ್ದೇಶನ ನೀಡಿದೆ.
ಕಂಪ್ಯೂಟರ್ ಸೈನ್ಸ್ ವಿಭಾಗವು ಕರೆದ ಸಭೆಯಲ್ಲಿ, ಎರಡು ಸೆಟ್ ಪತ್ರಿಕೆಗಳನ್ನು ಸಿದ್ಧಪಡಿಸುವಂತೆ ತಿಳಿಸಲಾಗಿದೆ. ಒಂದು ಆನ್‌ಲೈನ್ ಓಪನ್-ಬುಕ್ ಪರೀಕ್ಷೆ, ಇನ್ನೊಂದು ಪೆನ್-ಪೇಪರ್ ಪರೀಕ್ಷೆ. ಇಂಟರ್ನೆಟ್, ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಹೊಂದಿರುವರಿಗೆ ಜುಲೈನಲ್ಲಿ ಆನ್‌ಲೈನ್ ಪರೀಕ್ಷೆ ನಡೆಸಲಾಗುವುದು. ಉಳಿದವರು ಪೆನ್-ಪೇಪರ್ ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ಹೇಳಿದೆ.
ಮೇ 1 ರಂದು, ವಿಶ್ವವಿದ್ಯಾನಿಲಯವು ತನ್ನ ಅಂತಿಮ ವರ್ಷದ ಸ್ನಾತಕೋತ್ತರ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಜುಲೈ 1 ರಿಂದ ಪರೀಕ್ಷೆಗಳನ್ನು ನಡೆಸುವುದಾಗಿ ಘೋಷಿಸಿತು. ಕೊರೊನಾ ಸಾಂಕ್ರಾಮಿಕದಿಂದ ಪರಿಸ್ಥಿತಿ ಯತಾಸ್ಥಿತಿಗೆ ಬಾರದಿದ್ದರೆ ಓಪನ್ ಬುಕ್ ಪರೀಕ್ಷೆ ನಡೆಸಲು ತೀರ್ಮಾನಿಸಿದೆ.
ಓಪನ್ ಬುಕ್ ಪರೀಕ್ಷೆಯ ಅಡಿಯಲ್ಲಿ, ವಿದ್ಯಾರ್ಥಿಗಳು ಪ್ರಶ್ನೆಗಳಿಗೆ ಉತ್ತರಿಸಲು ಪುಸ್ತಕಗಳು, ಟಿಪ್ಪಣಿಗಳು ಮತ್ತು ಇತರ ಅಧ್ಯಯನ ಸಾಮಗ್ರಿಗಳನ್ನು ಬಳಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಮನೆಗಳಲ್ಲಿ ಕುಳಿತು ತಮ್ಮ ಕೋರ್ಸ್‌ಗೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆಗಳನ್ನು ಡೌನ್‌ಲೋಡ್ ಮಾಡಿಕೊಂಡು, ಎರಡು ಗಂಟೆಗಳ ಅವಧಿಯಲ್ಲಿ ಉತ್ತರಗಳನ್ನು ಅಪ್‌ಲೋಡ್ ಮಾಡಬೇಕು ಎಂದು ಹೇಳಿದೆ.
ಈ ಕ್ರಮವನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಟೀಕಿಸಿದ್ದಾರೆ. ಈ ಪದ್ದತಿ ತಾರಯಮ್ಯಕ್ಕೆ ಕಾರಣವಾಗಲಿದೆ, ಇದರಿಂದ ವಿದ್ಯಾರ್ಥಿಗಳಿಗೆ ಧಕ್ಕೆಯಾಗಲಿದೆ ಎಂದಿದ್ದಾರೆ.