ನವದೆಹಲಿ: ಗಡಿಯುದ್ದಕ್ಕೂ ಶಸ್ತ್ರಾಸ್ತ್ರ ಮತ್ತು ಮಾದಕ ದ್ರವ್ಯಗಳನ್ನು ಅಕ್ರಮವಾಗಿ ಸಾಗಿಸಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಆದರೂ, ನಮ್ಮ ಭದ್ರತಾ ಪಡೆಗೆ ಈ ಸವಾಲನ್ನು ಜಯಿಸುವ ಸಾಮರ್ಥ್ಯವಿದೆ ಎಂದು ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ ಮಹಾನಿರ್ದೇಶಕ ಎಸ್.ಎಸ್.ದೇಸ್ವಾಲ್ ತಿಳಿಸಿದ್ದಾರೆ.
"ಪಶ್ಚಿಮ ಗಡಿಯಲ್ಲಿ ಡ್ರೋನ್ಗಳು ಹೊಸ ಬೆದರಿಕೆ ತಂದೊಡ್ಡಿವೆ. ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಶಸ್ತ್ರಾಸ್ತ್ರ ಮತ್ತು ಡ್ರಗ್ಸ್ಗಳನ್ನು ಸಾಗಿಸಲು ಇವುಗಳನ್ನು ಬಳಸಲಾಗುತ್ತಿದೆ. ಆದರೆ ಅವುಗಳನ್ನು ಗುರುತಿಸುವ ಮತ್ತು ಅದಕ್ಕೆ ಕಡಿವಾಣ ಹಾಕುವ ವ್ಯವಸ್ಥೆ ನಮ್ಮಲ್ಲಿದೆ" ಎಂದು ಅವರು ಹೇಳಿದ್ದಾರೆ.
ದೇಶದ ಪ್ರಮುಖ ಭದ್ರತಾ ಪಡೆಗಳಲ್ಲಿ ಒಂದಾದ ಎನ್‌ಎಸ್‌ಜಿ 36ನೇ ಸಂಸ್ಥಾಪನಾ ದಿನವನ್ನು ಶುಕ್ರವಾರ ಆಚರಿಸಲಾಯಿತು. ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸಲು ಎನ್‌ಎಸ್‌ಜಿ ಉತ್ತಮ ಶಕ್ತಿಯಾಗಿದೆ. ಈ ಪಡೆ ನಿರ್ದಿಷ್ಟ ಸನ್ನಿವೇಶವನ್ನು ಅತ್ಯಂತ ಪರಿಣಾಮಕಾರಿ ಎದುರಿಸಲು ಸಜ್ಜುಗೊಂಡಿದೆ. ಮತ್ತು ಅದಕ್ಕಾಗಿ ವಿಶೇಷ ತರಬೇತಿಯನ್ನೂ ಪಡೆದಿದೆ. ಭಯೋತ್ಪಾದನೆಯಂತಹ ಗಂಭೀರ ಕೃತ್ಯಗಳನ್ನು ತಡೆಯಲು ಅಸಾಧಾರಣ ಸಂದರ್ಭಗಳಲ್ಲಿ ಈ ಪಡೆಯನ್ನು ಬಳಸಲಾಗುತ್ತದೆ.
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಡಿಜಿ ಆಗಿದ್ದ ದೇಸ್ವಾಲ್ ಅವರಿಗೆ ಕೇಂದ್ರ ಸರ್ಕಾರ, ಕಳೆದ ತಿಂಗಳು ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್(ಎನ್‌ಎಸ್‌ಜಿ) ಡಿಜಿ ಆಗಿ ಹೆಚ್ಚುವರಿ ಜವಾಬ್ದಾರಿ ವಹಿಸಿದೆ.